ಭಟ್ಕಳದ ಗೊರಟೆ ಕ್ರಾಸಿನಲ್ಲಿರುವ ಆರಾಧನಾ ಬಾರ್’ನಲ್ಲಿ ಆರ್‌ಸಿಬಿ ಗೆದ್ದ ಸಂಭ್ರಮಾಚರಣೆ ನಡೆದಿದ್ದು, ಈ ವೇಳೆ ಬಾರ್ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಹೊಡೆದಾಟ ನಡೆದಿದೆ. ಬಾರ್ ಬಂದ್ ಆಗುವ ವೇಳೆ ಬಿಯರ್ ಕೊಡದ ಕಾರಣ ಮುಂಡಳ್ಳಿ ನೀರಗದ್ದೆಯ ಮಹೇಂದ್ರ ನಾಯ್ಕ ಅವರು ಅಲ್ಲಿದ್ದ ಬಿಯರ್ ಬಾಟಲಿಯಿಂದಲೇ ಬಾರ್ ಮಾಲಕ ಯಶೋಧರ ನಾಯ್ಕ ಅವರಿಗೆ ಹೊಡೆದಿದ್ದಾರೆ.
ಮೇ 10ರ ರಾತ್ರಿ 11.45ಕ್ಕೆ ಮುಂಡಳ್ಳಿ ನೀರಗದ್ದೆಯ ಮಹೇಂದ್ರ ಶನಿಯಾರ ನಾಯ್ಕ, ಮಂಜುನಾಥ ಶನಿಯಾರ್ ನಾಯ್ಕ, ಚಂದನ ಮಾರುತಿ ನಾಯ್ಕ, ರಾಜೇಶ ನಾಗಪ್ಪ ನಾಯ್ಕ ಅವರು ಮತ್ತೊಬ್ಬರ ಜೊತೆ ಆರಾಧನಾ ಬಾರ್ ಪ್ರವೇಶಿಸಿದ್ದರು. ಕಂಠಪೂರ್ತಿ ಕುಡಿದ ಅವರು ಆರ್‌ಸಿಬಿ ಗೆದ್ದ ಸಂಭ್ರಮಾಚರಣೆಯನ್ನು ನಡೆಸಿದರು. ಈ ವೇಳೆ ಮಹೇಂದ್ರ ನಾಯ್ಕ ಅವರು `ಚಿಯರ್ಸ’ ಎಂದು ಕೂಗಿ ಅಲ್ಲಿದ್ದ ಟೇಬಲ್ ಮೇಲೆ ಬಿಯರ್ ಚೆಲ್ಲಿದರು. ಇದನ್ನು ನೋಡಿದ ಬಾರ್ ಮಾಲಕ ಯಶೋಧರ್ ನಾಯ್ಕ ಅವರು `ಈ ರೀತಿ ಬಿಯರ್ ಚೆಲ್ಲಬೇಡಿ’ ಎಂದು ಕಿವಿಮಾತು ಹೇಳಿದರು.
ಬಾರ್ ಮಾಲಕರ ಬುದ್ದಿವಾದದಿಂದ ಸಿಟ್ಟಾದ ಮಹೇಂದ್ರ ನಾಯ್ಕ ಅವರು ಏಕಾಏಕಿ ಕೂಗಾಡಲು ಶುರು ಮಾಡಿದರು. ಕೈಯಲ್ಲಿದ್ದ ಬಿಯರ್ ಬಾಟಲಿಯನ್ನು ಟೇಬಲ್ ಮೇಲೆ ಬಡಿದರು. `ಈ ಬಾರಿಗೆ ಲೈಸೆನ್ಸ್ ಇದೆಯಾ?’ ಎಂದು ಪ್ರಶ್ನಿಸಿದರು. `ಮತ್ತೊಂದು ಬಿಯರ್ ಕೊಡಿ’ ಎಂದು ತಾಕೀತು ಮಾಡಿದರು. ಈ ವೇಳೆ ಬಾರಿನಲ್ಲಿ ಕೆಲಸ ಮಾಡುವ ರಮೇಶ ವಸಂತ ನಾಯ್ಕ ಅವರು ಆಗಮಿಸಿ `ಬಾರ್ ಬಂದ್ ಮಾಡುವ ಟೈಂ ಆಗಿದೆ. ನಿಮಗೆ ಬಿಯರ್ ಪಾರ್ಸಲ್ ಕೊಡಲೇ?’ ಎಂದು ಪ್ರಶ್ನಿಸಿದರು. ಇದರಿಂದ ಇನ್ನಷ್ಟು ಕೆಂಡಾಮAಡಲರಾದ ಮಹೇಂದ್ರ ನಾಯ್ಕ ಅವರು ಕೆಟ್ಟದಾಗಿ ಬೈದು ಅಲ್ಲಿದ್ದ ಬಿಯರ್ ಬಾಟಲಿಯನ್ನು ನೆಲಕ್ಕೆ ಒಡೆದರು.
ಈ ವೇಳೆ ಅಲ್ಲಿದ್ದ ಚಂದನ ನಾಯ್ಕ ಅವರು ರಮೇಶ ನಾಯ್ಕ ಅವರನ್ನು ದೂಡಿಕೊಂಡು ಕೌಂಟರಿನವರೆಗೆ ಬಂದು ಗಲಾಟೆ ಮಾಡಿದರು. ಮಹೇಂದ್ರ ನಾಯ್ಕ ಅವರ ಜೊತೆಗಿದ್ದ ಮಂಜುನಾಥ ನಾಯ್ಕ, ಚಂದನ ನಾಯ್ಕ, ರಾಜೇಶ ನಾಯ್ಕ ಹಾಗೂ ಮತ್ತೊಬ್ಬ ಅಪರಿಚಿತ ಸೇರಿ ರಮೇಶ ನಾಯ್ಕ ಅವರಿಗೆ ಹೊಡೆದರು. ತಪ್ಪಿಸಲು ಬಂದ ಯಶೋಧರ ನಾಯ್ಕ ಅವರಿಗೂ ಬಿಯರ್ ಬಾಟಲಿಯಿಂದ ಹೊಡೆದರು. ಬಿಯರ್ ಬಾಟಲಿ ಏಟು ತಪ್ಪಿಸಿಕೊಂಡ ಯಶೋಧರ ನಾಯ್ಕ ಅವರಿಗೆ ಆ ಐದು ಜನ ಸೇರಿ ಥಳಿಸಿ, ಅಲ್ಲಿಂದ ಹೊರಗೆ ಹೋದರು.