ಯಲ್ಲಾಪುರ ತಾಲೂಕು ಪಂಚಾಯತದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಯೋಗೇಶ ಮಡಿವಾಳ ಅವರಿಗೆ ಸಿದ್ದಾಪುರದಲ್ಲಿ ಲಾರಿ ಗುದ್ದಿದೆ. ಸಾವು-ಬದುಕಿನ ನಡುವೆ ಅವರು ಹೋರಾಡುತ್ತಿದ್ದಾರೆ.
ಸಿದ್ದಾಪುರ ತಾಲೂಕಿನ ಗುಂಜಗೂಡು ಬಳಿಯ ಯೋಗೇಶ್ ಶ್ರೀಧರ ಮಡಿವಾಳ (33) ಅವರು ಯಲ್ಲಾಪುರದ ತಾಲೂಕು ಪಂಚಾಯತದ ಎನ್ ಆರ್ ಎಲ್ ಎಂ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೇ 11ರ ರಾತ್ರಿ ಅವರು ಶಿರಸಿ-ಸಿದ್ದಾಪುರ ಮಾರ್ಗವಾಗಿ ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಮುಂಡಗೋಡಿನ ಪಾಳಾದ ಅಮೀರ್ ಖಾನ್ ಅವರು ಜೋರಾಗಿ ಲಾರಿ ಓಡಿಸಿಕೊಂಡು ಬಂದಿದ್ದು, ಯೋಗೀಶ ಮಡಿವಾಳ ಅವರಿಗೆ ಆ ಲಾರಿ ಗುದ್ದಿದರು.
ತ್ಯಾಗಲಿ ಬಳಿ ಬೈಕಿಗೆ ಲಾರಿ ಗುದ್ದಿದ ರಭಸಕ್ಕೆ ಯೋಗೀಶ ಮಡಿವಾಳ ಅವರು ನೆಲಕ್ಕೆ ಅಪ್ಪಳಿಸಿದರು. ಅಪಘಾತದ ರಭಸಕ್ಕೆ ಯೋಗೀಶ ಮಡಿವಾಳ ಅವರ ತಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು. ಕಾಲು-ಕೈಗೆ ಸಹ ಗಂಭೀರವಾದ ಗಾಯಗಳಾದವು. ಬೈಕ್ ಸಹ ಜಖಂ ಆಯಿತು. ಗಾಯಗೊಂಡ ಯೋಗೇಶ ಮಡಿವಾಳ ಅವರು ಈ ಅಪಘಾತದಲ್ಲಿ ನೋವುಂಡಿದ್ದು, ಅವರು ಸಾವು-ಬದುಕಿನ ಹೋರಾಟದಲ್ಲಿದ್ದಾರೆ. ಅದೇ ಊರಿನ ಶೃತಿ ಮಡಿವಾಳ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.