ದಾಂಡೇಲಿ ಲೋಕೋಪಯೋಗಿ ಪ್ರವಾಸಿ ಮಂದಿರದ ಬಳಿ ಮೊಸಳೆಯೊಂದು 40ಕ್ಕೂ ಅಧಿಕ ಮರಿ ಹಾಕಿದೆ. ಎರಡು ತಿಂಗಳ ಹಿಂದೆ ದಂಡೆಯ ಉಸುಕಿನ ಪ್ರದೇಶದಲ್ಲಿ ಮೊಸಳೆ ಗವಿಯಾಕಾರದ ಸ್ಥಳ ಮಾಡಿದ್ದು, ಅಲ್ಲಿಟ್ಟಿದ್ದ ಮೊಟ್ಟೆಗಳು ಮೊಸಳೆ ಮರಿಗಳಾಗಿ ಹೊರ ಬಂದಿವೆ. ಆ ಮರಿಗಳನ್ನು ತಾಯಿ ಮೊಸಳೆ ಕಾವಲು ಕಾಯುತ್ತಿದೆ.
ಸದ್ಯ ನದಿ ದಂಡೆಯ ಪ್ರದೇಶದಲ್ಲಿ ಮೊಸಳೆ ಮರಿಗಳು ಓಡಾಡಿಕೊಂಡಿರುವುದು ಕಂಡುಬರುತ್ತಿದೆ. ಜನ ಬಂದ ಕೂಡಲೇ ಮೊಸಳೆಗಳು ಒಳಗೆ ಸೇರುತ್ತಿದ್ದು, ಇನ್ನೂ ಕೆಲವು ತಾಯಿ ಮೊಸಳೆ ಮೈಮೇಲೆ ಏರಿ ಕುಳಿತುಕೊಳ್ಳುತ್ತಿವೆ. ತಾಯಿ ಮೊಸಳೆ ಮಾತ್ರ ಆ ಸ್ಥಳವನ್ನು ಬಿಟ್ಟು ಎಲ್ಲೂ ಹೋಗದೇ ಎಲ್ಲರ ಓಡಾಟ ಗಮನಿಸುತ್ತಿದೆ.
ಈಚೆಗೆ ನದಿಯಲ್ಲಿನ ಮೊಸಳೆಗಳು ಆಹಾರ ಅರೆಸಿ ಜನವಸತಿ ಪ್ರದೇಶಗಳಿಗೂ ಬರುತ್ತಿವೆ. ಈಗಾಗಲೇ ಮೊಸಳೆ ದಾಳಿಗೆ ಐದು ಸಾವು ಸಹ ಸಂಭವಿಸಿದೆ. ಅನೇಕರು ಮೊಸಳೆ ದಾಳಿಗೆ ಒಳಗಾಗಿ ಗಾಯಗೊಂಡಿದ್ದಾರೆ. ಹೀಗಿರುವಾಗ ಒಂದೇ ಮೊಸಳೆ 40ಕ್ಕೂ ಅಧಿಕ ಮರಿ ಹಾಕಿರುವುದು ಜನರ ಅಚ್ಚರಿಗೆ ಕಾರಣವಾಗಿದೆ. ಇದೇ ರೀತಿ ಎಲ್ಲಾ ಮೊಸಳೆಗಳು 40ರ ಆಸುಪಾಸಿನಲ್ಲಿ ಮರಿ ಹಾಕಿದರೆ ಕಾಳಿ ನದಿ ಪೂರ್ತಿ ಮೊಸಳೆಯಿಂದಲೇ ಕೂಡುವ ಆತಂಕ ಎದುರಾಗಿದೆ.