ಯಕ್ಷಗಾನದ ಕಲಾವಿದ, ಭಾಗವತ ಹಾಗೂ ವಾದಕರಾಗಿಯೂ ಗುರುತಿಸಿಕೊಂಡು `ದಶಾವತಾರಿ’ ಎಂದೇ ಪ್ರಸಿದ್ಧಿಪಡೆದಿದ್ದ ಕಪ್ಪೆಕೆರೆ ಸುಬ್ರಾಯ ಹೆಗಡೆ ಅವರು ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. 79ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಯಕ್ಷಗಾನದಲ್ಲಿ ಒಬ್ಬನೇ ಕಲಾವಿದ ಭಾಗವತ, ವೇಷಧಾರಿ ಹಾಗೂ ವಾದಕರಾಗಿಯೂ ಪಾತ್ರ ನಿಭಾಯಿಸುವುದು ಅಪರೂಪ. ಆದರೆ, ಹೊನ್ನಾವರದ ಸುಬ್ರಾಯ ಹೆಗಡೆ ಅವರು ಈ ಮೂರು ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಅನೇಕರ ಮೆಚ್ಚುಗೆಗಳಿಸಿದ್ದರು. 1947ರಲ್ಲಿ ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ ಈಶ್ವರ ಹೆಗಡೆ ಮತ್ತು ಗೋಪಿ ಹೆಗಡೆ ದಂಪತಿ ಪುತ್ರರಾಗಿ ಜನಿಸಿದ ಸುಬ್ರಾಯ ಹೆಗಡೆ ಅವರಿಗೆ ಯಕ್ಷಗಾನ ಎಂಬುದು ರಕ್ತಗತವಾಗಿ ಬಂದಿತ್ತು. ಹಿರಿಯ ಸಹೋದರ ಕಪ್ಪೆಕೆರೆ ಮಹಾದೇವ ಹೆಗಡೆಯವರ ಹಾದಿಯಲ್ಲೇ ಸಾಗಿದ ಅವರು ಕೆರೆಮನೆ ಮಹಾಬಲ ಹೆಗಡೆ ಮತ್ತು ಗಣಪತಿ ಹೆಗಡೆಯವರಲ್ಲಿ ಕಲೆ ಅಭ್ಯಾಸ ಮಾಡಿ, ಮುಂದೆ ತಮ್ಮದೇ ಆದ ಅಭಿಮಾನಿಗಳಪಡೆಹೊಂದಿದವರಾಗಿದ್ದರು.
ಸುಬ್ರಾಯ ಹೆಗಡೆ ಅವರ ತಾಳ ಮತ್ತು ಲಯದ ಮೇಲಿನ ಅಪ್ರತಿಮ ಹಿಡಿತಕ್ಕಾಗಿ ಅವರಿಗೆ ‘ಲಯ ಬ್ರಹ್ಮ’ ಎಂಬ ಬಿರುದು ಒಲಿದುಬಂದಿತ್ತು. ಇಡಗುಂಜಿ, ಗುಂಡಬಾಳ, ಸಾಲಿಗ್ರಾಮ, ಬಚ್ಚಗಾರು ಹಾಗೂ ಅಮೃತೇಶ್ವರಿ ಮೇಳಗಳಲ್ಲಿ ಸುಮಾರು 45 ವರ್ಷಗಳ ಕಾಲ ನಿರಂತರವಾಗಿ ತಿರುಗಾಟ ನಡೆಸಿದ ಅವರು ಯಕ್ಷಗಾನದ ಪೌರಾಣಿಕ ಚೌಕಟ್ಟನ್ನು ಕಾಪಾಡಿಕೊಂಡು ಬಂದವರು. ಕೇವಲ ಪ್ರದರ್ಶನ ನೀಡದೇ ರಂಗನಿರ್ದೇಶಕರಾಗಿ ಪ್ರಸಂಗದ ಗತಿ-ಸ್ಥಿತಿಯನ್ನು ನಿರ್ಧರಿಸುತ್ತಿದ್ದರು. ಯಕ್ಷಗಾನದ ಮೂಲಕ ಅಭಿಮಾನಿಗಳನ್ನುಗಳಿಸಿದ್ದ ಸುಬ್ರಾಯ ಹೆಗಡೆ ಅವರು ಬುಧವಾರ ನಿಧನರಾದರು.