ಜನ ಗಣತಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಸಿದ್ದಾಪುರದ ಶಿಕ್ಷಕಿ ಪೂರ್ಣಿಮಾ ಭಟ್ಟ ಅವರಿಗೆ ಟಾಕ್ಟರ್ ಹಾಯ್ದಿದ್ದು, ಪೂರ್ಣಿಮಾ ಭಟ್ಟ ಅವರು ನಡುರಸ್ತೆಯಲ್ಲಿಯೇ ಶವವಾಗಿದ್ದಾರೆ.
ಸ್ಕೂಟಿ ಮೇಲೆ ಪೂರ್ಣಿಮಾ ಭಟ್ಟ ಅವರು ಹೊರಟಾಗ ಎರಡು ದನಗಳು ರಸ್ತೆ ಮೇಲೆ ಕಾದಾಟ ನಡೆಸಿವೆ. ಅದರಿಂದ ನಿಯಂತ್ರಣ ತಪ್ಪಿದ ಪೂರ್ಣಿಮಾ ಭಟ್ಟ ಅವರು ರಸ್ತೆಯ ಮೇಲೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿAದ ಬಂದ ಟಾಕ್ಟರ್ ಅವರ ಮೈಮೇಲೆ ಹತ್ತಿದೆ. ಟಾಕ್ಟರ್ ಚಕ್ರ ಮೈ ಮೇಲೆ ಹತ್ತಿದ್ದರಿಂದ ಪೂರ್ಣಿಮಾ ಭಟ್ಟ (46) ಅವರು ಅಲ್ಲಿಯೇ ಸಾವನಪ್ಪಿದ್ದಾರೆ.
ಪೂರ್ಣಿಮಾ ಭಟ್ಟ ಅವರು ಹೊಸೂರು ಶಾಲೆಯ ಶಿಕ್ಷಕಿಯಾಗಿದ್ದರು. ಅವರ ಪತಿ ಜನಾರ್ಧನ ಭಟ್ಟ ಅವರು ಶಿಕ್ಷಕರಾಗಿದ್ದಾರೆ. ಪೂರ್ಣಿಮಾ ಭಟ್ಟ ಅವರು ಗಣತಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಗುರುವಾರ ಅವರು ಸಿದ್ಧಪಡಿಸಿದ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದು, `ಅದನ್ನು ಕಪ್ಪು ಶಾಯಿಯಲ್ಲೇ ಸಿದ್ಧಪಡಿಸಿ’ ಎಂಬ ಸೂಚನೆ ಬಂದಿತು. ಈ ಹಿನ್ನಲೆ ಅವರು ಮತ್ತೆ ವರದಿ ಸಿದ್ಧಪಡಿಸಿ ಕಚೇರಿಗೆ ತೆರಳುತ್ತಿದ್ದಾಗ ಈ ದುರಂತ ನಡೆದಿದೆ.
ಶಿಕ್ಷಕಿಯ ಶವವನ್ನು ತಾಲೂಕಾ ಆಸ್ಪತ್ರೆಗೆ ತರಲಾಗಿದ್ದು, ನೂರಾರು ಶಿಕ್ಷಕರು ಆಗಮಿಸಿ ಸಂತಾಪ ಸೂಚಿಸಿದರು. ತಹಶೀಲ್ದಾರ ಎಂ ಆರ್ ಕುಲಕರ್ಣಿ, ಪೊಲೀಸ್ ಇನ್ಸ್ಪೆಕ್ಟರ್ ಜೆ ಬಿ ಸೀತಾರಾಮ, ಕ್ಷೇತ್ರಶಿಕ್ಷಣಾಧಿಕಾರಿ ಎಂ ಎಚ್ ನಾಯ್ಕ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯಾಕೂಬ್ ಶೇಖ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು.