ಅನುಮಾನಾಸ್ಪದವಾಗಿ ಸಂಚರಿಸಿದ ಬುಲೇರೋ ಬಗ್ಗೆ ಅಂಕೋಲಾ ಗುಂಡುಬಾಳದ ವಿಶ್ವೇಶ್ವರ ಭಟ್ಟ ಅವರು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಬುಲೇರೋ ತಪಾಸಣೆ ನಡೆಸಿದ ಪೊಲೀಸರಿಗೆ ಮಂಡಕ್ಕಿ ಚೀಲಗಳ ಮಧ್ಯೆ ಗೀರ್ ತಳಿಯ ಹೋರಿಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಾಣಿಸಿದೆ.
ಅಂಕೋಲಾ ಗುಂಡುಬಾಳದ ನೆವಳಸೆ ಬಳಿ ವಿಶ್ವೇಶ್ವರ ವಿಷ್ಣು ಭಟ್ಟ ಅವರು ವಾಸವಾಗಿದ್ದಾರೆ. ರೈತರಾಗಿರುವ ಅವರು ಹೈನುಗಾರಿಕೆಯ ಬಗ್ಗೆಯೂ ಅಪಾರ ಆಸಕ್ತಿವಹಿಸಿದ್ದಾರೆ. ಭಾನುವಾರ ನಸುಕಿನ 1ಗಂಟೆ ಅವಧಿಯಲ್ಲಿ ಬುಲೇರೋ ಪಿಕಪ್ ಒಂದು ಅನುಮಾನಾಸ್ಪದವಾಗಿ ಓಡಾಡಿರುವುದನ್ನು ಅವರು ನೋಡಿದ್ದಾರೆ. ಆ ರಾತ್ರಿಯೇ ಅವರು ಪೊಲೀಸರಿಗೆ ಫೋನಾಯಿಸಿ, ಆ ಬುಲೆರೋವನ್ನು ಹಿಂಬಾಲಿಸಿದ್ದಾರೆ.
ವಿಶ್ವೇಶ್ವರ ಭಟ್ಟ ಅವರು ಬರುವುದನ್ನು ನೋಡಿ ಬುಲೇರೋ ಇನ್ನಷ್ಟು ವೇಗವಾಗಿ ಚಲಿಸಿದೆ. ಗುಂಡುಬಾಳದ ಮಂಗಖಾನ್ ಬಳಿ ಆ ಬುಲೇರೋ ಚಾಲಕನ ನಿಯಂತ್ರಣ ತಪ್ಪಿದೆ. ಜೊತೆಗೆ ಬುಲೇರೋ ಅಲ್ಲಿಯೇ ಪಲ್ಟಿಯಾಗಿದೆ. ಈ ವೇಳೆಗಾಗಲೇ ಅಲ್ಲಿ ಪೊಲೀಸರು ಆಗಮಿಸಿದ್ದು, ಬುಲೆರೋ ತಪಾಸಣೆ ನಡೆಸಿದಾಗ ಅದರಲ್ಲಿ ಎರಡು ಚೀಲ ಮಂಡಕ್ಕಿ ಸಿಕ್ಕಿದೆ. ಅದಾದ ನಂತರ ಎರಡು ಜಾನುವಾರುಗಳ ಅಕ್ರಮ ಸಾಗಾಟವೂ ಬೆಳಕಿಗೆ ಬಂದಿದೆ. ಗೀರ್ ತಳಿಯ ಹೋರಿಗಳನ್ನು ಮಾಂಸಕ್ಕಾಗಿ ಸಾಗಾಟ ಮಾಡುತ್ತಿದ್ದು, ಅದು ಗೊತ್ತಾಗದಂತೆ ಮಂಡಕ್ಕಿ ಚೀಲ ಅಡ್ಡವಿರಿಸಿದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಎರಡು ರಾಜಸ್ಥಾನ ಗೀರ ತಳಿಯ ಹೋರಿಗಳನ್ನು ವಶಕ್ಕೆಪಡೆದ ಪೊಲೀಸರು ಬೆಳಗಾವಿ ನೋಂದಣಿ ಹೊಂದಿದ್ದ ಮಹೀಂದ್ರಾ ಬೊಲೆರೊ ವಾಹನವನ್ನು ಜಪ್ತು ಮಾಡಿದ್ದಾರೆ. ಆ ಪಿಕಪ್’ನಲ್ಲಿದ್ದ ಕಿತ್ತೂರಿನ ಅಪ್ಪಾಸಾಬ್ ಹಾಗೂ ಬೈಲಹೊಂಗಲ ನಿವಾಸಿ ಸಚಿನ್ ಬಸಪ್ಪ ಗಡೇದ ಅವರನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.