ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 18ರಂದು ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿದೆ. ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವೂ ಈ ಬಗ್ಗೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳಲ್ಲಿ ಭಾರೀ ಪ್ರಮಾಣದ ಗಾಳಿ, ಗುಡುಗು ಹಾಗೂ ಮಳೆಯಾಗುವ ಸಾಧ್ಯತೆಗಳಿದೆ. ಮೇ 17ರಿಂದಲೇ ಮಳೆ ಶುರುವಾಗಿದ್ದು, ಅದು ಮುಂದುವರೆಯುವ ಬಗ್ಗೆ ವಿಜ್ಞಾನಿಗಳು ಅಂದಾಜಿಸಿದ್ದಾರೆ. ಈ ದಿನ ಮಳೆಯ ಜೊತೆಗೆ ಗಾಳಿ ಕೂಡಾ 40-60ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಗಳಿವೆ.
ಈ ಹಿನ್ನಲೆ ಉತ್ತರ ಕನ್ನಡ ಜಿಲ್ಲಾಡಳಿತ ಜನರಿಗೆ ವಿವಿಧ ಸೂಚನೆ ನೀಡಿದೆ. `ಅಪಾಯಕಾರಿ ಮರಗಳಿರುವ ಮನೆ ಅಂಚಿನ ಜನ ಸುರಕ್ಷಿತ ಸ್ಥಳಕ್ಕೆ ಹೋಗಬೇಕು. ಮರಗಳ ಅಡಿಭಾಗ ಆಶ್ರಯಪಡೆಯುವುದು ಅಪಾಯಕಾರಿ’ ಎಂದು ಸರ್ಕಾರ ಹೇಳಿದೆ. ಸಮುದ್ರದಲ್ಲಿ ಅಲೆಗಳು ತೀವ್ರವಾಗಿರುವುದರಿಂದ ಮೀನುಗಾರರು ಕಡಲಿಗೆ ಹೋಗದಂತೆ ಜಿಲ್ಲಾಡಳಿತ ಸೂಚಿಸಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ ಮತ್ತು ನೀರಿರುವ ಪ್ರದೇಶಕ್ಕೆ ತೆರಳದಂತೆ ಸೂಚನೆ ನೀಡಿದೆ. ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆವಹಿಸಬೇಕು ಎಂದು ಸೂಚಿಸಲಾಗಿದೆ.