ಯಲ್ಲಾಪುರದ ಹಿರಿಯ ಅಡಿಕೆ ವರ್ತಕ ಉಮೇಶ ಭಟ್ಟ ಅವರು ನಿಧನರಾಗಿದ್ದು, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಈ ನಡುವೆ ಅವರ ಶೃದ್ಧಾಂಜಲಿ ಸಭೆಯೂ ಅತ್ಯಂತ ಸಡಗರದಿಂದ ನಡೆದಿದೆ. ಸಭೆ ಕೊನೆಗೆ ತೆಗೆದ ಫೋಟೋದಲ್ಲಿಯೂ ಸಭೆಯಲ್ಲಿ ಭಾಗವಹಿಸಿದವರು ಸಂತಸದ ಕ್ಷಣದಲ್ಲಿರುವುದು ಕಾಣಿಸಿದೆ.
ಸಾಮಾನ್ಯವಾಗಿ ಶೃದ್ಧಾಂಜಲಿ ಸಭೆ ಅತ್ಯಂತ ದುಖ:ದಿಂದ ಕೂಡಿರುತ್ತದೆ. ಶೃದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದವರು ಭಾವನಾತ್ಮಕವಾಗಿರುತ್ತಾರೆ. ಅಗಲಿದ ಚೇತನದ ಗುಣಗಾನ ಮಾಡಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಗಣ್ಯರು ಮಾತನಾಡುತ್ತಾರೆ. ಆದರೆ, ಅಡಿಕೆ ವರ್ತಕರಾಗಿದ್ದ ಉಮೇಶ ಭಟ್ಟ ಅವರು ಜೀವನದಲ್ಲಿಯೂ ಸದಾ ಲವಲವಿಕೆಯಿಂದ ಕೂಡಿದ್ದು, ಅವರ ಶೃದ್ಧಾಂಜಲಿ ಸಭೆ ಸಹ ಅಷ್ಟೇ ಲವಲವಿಕೆಯಿಂದ ನಡೆದಿದೆ. ಉಮೇಶ ಭಟ್ಟ ಅವರು ಸಾಕಷ್ಟು ಕಷ್ಟ-ನಷ್ಟಗಳ ನಡುವೆಯೂ ಗೆಲುವು ಸಾಧಿಸಿ ಬದುಕಿದ್ದರು. ಎಷ್ಟೇ ಕಷ್ಟ ಬಂದರೂ ಜನರ ಜೊತೆ ಸಂತಸದಿAದಲೇ ಜೀವಿಸಿದ್ದರು. ಸದ್ಯ ಅವರ ಆಪ್ತರು ಶೃದ್ಧಾಂಜಲಿ ಸಭೆಯಲ್ಲಿಯೂ ಅದನ್ನೇ ಸ್ಮರಿಸಿದರು.
ಕುಮಟಾ ಮೂಲದ ಉಮೇಶ ಭಟ್ಟ ಅವರು ಯಲ್ಲಾಪುರಕ್ಕೆ ಆಗಮಿಸಿ ಅಡಿಕೆ ವ್ಯವಹಾರದ ಟ್ರೇಡಿಂಗ್ ಕಂಪನಿ ಕಟ್ಟಿದ್ದರು. ಅನೇಕ ಅಡಿಕೆ ವ್ಯಾಪಾರಿಗಳಿಗೆ ಅವರು ಮಾರ್ಗದರ್ಶಕರಾಗಿದ್ದರು. ಅತ್ಯಂತ ಬಡತನದಲ್ಲಿ ಬದುಕಿದ್ದ ಅವರು ಪ್ರಾರಂಭದಲ್ಲಿ ಸೈಕಲ್ ಮೂಲಕವೇ ಎಲ್ಲಡೆ ಸಂಚರಿಸಿ ವ್ಯಾಪಾರ-ವಹೀವಾಟು ನಡೆಸುತ್ತಿದ್ದರು. 73 ವರ್ಷವಾದರೂ ಅವರ ಜೀವನೋತ್ಸಾಹ ಮಾತ್ರ ಕಡಿಮೆ ಆಗಿರಲಿಲ್ಲ. ಜೀವನದಲ್ಲಿ ಗಂಭೀರತೆಯಿದ್ದರೂ ಉಮೇಶ ಭಟ್ಟ ಅವರು ಆಪ್ತರ ಬಳಿ ನವಿರಾದ ಹಾಸ್ಯದೊಂದಿಗೆ ಮಾತನಾಡುತ್ತಿದ್ದರು.
ಮೇ 19ರಂದು ಉಮೇಶ ಭಟ್ಟ ಅವರು ನಿಧನರಾದರು. ಈ ಹಿನ್ನಲೆ ಮೇ 19ರಂದು ವಿವಿಧ ಸಂಘ-ಸoಸ್ಥೆಯವರು ಹಾಗೂ ಅಡಿಕೆ ವ್ಯಾಪಾರಿಗಳು ಎಪಿಎಂಸಿ ಬಳಿ ಶೃದ್ಧಾಂಜಲಿ ಸಭೆ ನಡೆಸಿದರು. ಈ ಶೃದ್ಧಾಂಜಲಿ ಸಭೆಯಲ್ಲಿ ಉಮೇಶ ಭಟ್ಟ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು. ಅದಾದ ನಂತರ ಉಮೇಶ ಭಟ್ಟ ಅವರ ಜೀವನದ ಬಗ್ಗೆ ಕೆಲವರು ಮಾತನಾಡಿದ್ದು, ಅವರಲ್ಲಿದ್ದ ಹಾಸ್ಯಪ್ರಜ್ಞೆಯನ್ನು ಉದಾಹರಣೆಯೊಂದಿಗೆ ವಿವರಿಸಿದರು. ಈ ವೇಳೆ ಶೃದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದವರು ದುಖಃ ಮರೆತು ನಗೆಗಡಲಿನಲ್ಲಿ ತೇಲಿದರು. ಶೃದ್ಧಾಂಜಲಿ ಕಾರ್ಯಕ್ರಮದ ಫೋಟೋ ತೆಗೆಯುವ ಕ್ಷಣದಲ್ಲಿಯೂ ಆ ನಗೆ ಹಾಗೇ ಉಳಿದಿದ್ದು, ಚಿತ್ರ ದಾಖಲೆಯಲ್ಲಿ ಸೆರೆಯಾಯಿತು.