ಶಿರೂರು ಗುಡ್ಡ ಕುಸಿತವಾಗಿ ಎರಡು ವರ್ಷ ಸಮೀಪಿಸಿದ ನಂತರ ನದಿ ನೀರಿಗೆ ಬಿದ್ದ ಗುಡ್ಡದ ಮಣ್ಣು ತೆರವು ಕಾರ್ಯಾಚರಣೆ ಶುರುವಾಗಿದೆ. ಸದ್ಯ ಗಂಗಾವಳಿ ನದಿಯಲ್ಲಿ ಶೇಖರಣೆಯಾಗಿರುವ ಮಣ್ಣು ತೆರವಿಗಾಗಿ ಬ್ಯಾಥಮೆಟ್ರಿ ಸರ್ವೇ ಕಾರ್ಯ ನಡೆಸಲಾಗಿದೆ.
ಅಂಕೋಲಾದ ಶಿರೂರು ಬಳಿ ಸಂಭವಿಸಿದ ಭೀಕರ ಗುಡ್ಡ ಕುಸಿತ ದುರಂತ ನಡೆದು ಎರಡು ವರ್ಷ ಸಮೀಪಿಸಿದರೂ ಅಲ್ಲಿನ ಅಪಾಯ ಮಾತ್ರ ತಪ್ಪಿಲ್ಲ. ಮುಂದಿನ ಮಳೆಗಾಲದಲ್ಲಿ ಇನ್ನಷ್ಟು ಅನಾಹುತ ನಡೆಯುವ ಸಾಧ್ಯತೆಯಿದೆ. ಅಪಾಯಕಾರಿ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಲು ನೀಡಿದ ಗಡುವು ಮುಗಿದರೂ ಆ ಕೆಲಸ ಮುಗಿದಿಲ್ಲ. ಗುಡ್ಡದ ಇನ್ನೊಂದು ಭಾಗ ಅಪಾಯಕಾರಿ ರೀತಿ ಭಾಸವಾಗುತ್ತಿದ್ದು, ಅವಘಡ ತಡೆಗೆ ಮಾಡಿದ ಯೋಜನೆಗಳು ಗಂಭೀರವಾಗಿ ಕಾರ್ಯರೂಪಕ್ಕೆ ಬಂದಿಲ್ಲ.
2024ರ ಜುಲೈ ತಿಂಗಳಲ್ಲಿ ಶಿರೂರು ಗುಡ್ಡ ಕುಸಿದವಾಗಿದ್ದರಿಂದ ಗಂಗಾವಳಿ ನದಿ ಸೇರಿದ ಮಣ್ಣು ಅಲ್ಲಿಯೇ ಇದೆ. ಸಾವಿರಾರು ಟನ್ ಮಣ್ಣಿನ ಜೊತೆ ಕಲ್ಬಂಡೆಗಳು ನದಿ ಸೇರಿದ್ದರಿಂದ ನೀರು ಹರಿಯುವಿಕೆಗೂ ಸಮಸ್ಯೆಯಾಗಿದೆ. ನದಿಯಲ್ಲಿ ಕಲ್ಲು-ಮಣ್ಣುಗಳಿರುವುದರಿಂದ ಮಳೆಗಾಲದ ಅವಧಿಯಲ್ಲಿ ನದಿ ನೀರು ಮತ್ತೆ ಹೆದ್ದಾರಿಗೆ ಬರುವ ಸಾಧ್ಯತೆಗಳಿದ್ದು, ಈ ಹಿನ್ನಲೆ ಸದ್ಯ ಆ ಮಣ್ಣನ್ನು ಅಲ್ಲಿಂದ ತೆರವು ಮಾಡುವ ಕಾರ್ಯಕ್ಕೆ ಚಾಲನೆ ದೊರೆತಿದೆ.
ಗಂಗಾವಳಿ ನದಿಯಲ್ಲಿ ದೋಣಿ ಮೂಲಕ ಬ್ಯಾಥಮೆಟ್ರಿ ಸರ್ವೇ ಕಾರ್ಯ ನಡೆದಿದ್ದು, ಬಂದರು ಇಲಾಖೆಯ ಇಂಜಿನಿಯರ್ ರಾಜ್‌ಕುಮಾರ್ ಅವರು ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಪ್ರಾಕೃತಿಕ ವಿಕೋಪ ವಿಭಾಗದ ಸಹಾಯಕ ನಿರ್ದೇಶಕ ಪ್ರಶಾಂತ್ ಅವರು ಸ್ಥಳದಲ್ಲಿದ್ದಾರೆ. ಇನ್ನೂ ಮೂರು ದಿನದಲ್ಲಿ ವಿವಿಧ ಯಂತ್ರಗಳನ್ನು ಬಳಸಿ ನದಿಯಲ್ಲಿದ್ದ ಮಣ್ಣು ತೆರವು ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.