ಕಾರವಾರದ ಚಿತ್ತಾಕುಲದ ಮನೆಯೊಂದರಲ್ಲಿ ಒಂಟಿಯಾಗಿ ವಾಸವಾಗಿದ್ದ ಮಹಿಳೆಗೆ ಪೊಲೀಸ್ ವೇಷದಾರಿಯೊಬ್ಬರು ಫೋನ್ ಮಾಡಿ ಬೆದರಿಸಿದ್ದು, 10 ಲಕ್ಷ ರೂ ಹಣ ಬೇಡಿದ್ದಾರೆ. ಫೋನ್ ಮಾಡಿದವರ ಸೂಚನೆ ಮೇರೆಗೆ ರೇಶ್ಮಾ ಕೇಣಿ ಅವರು 9.94 ಲಕ್ಷ ರೂ ಹಣ ವರ್ಗಾಯಿಸಿದ್ದಾರೆ!
ಕಾರವಾರದ ಚಿತ್ತಾಕುಲದ ಬೆಟ್ಟನಾಯ್ಕವಾಡ ರೇಶ್ಮಾ ಗಜಾನನ ಕೇಣಿ (41) ಅವರು ವಾಸವಾಗಿದ್ದಾರೆ. ಜನವರಿ 23ರಂದು ಅವರಿಗೆ ಕೋರಿಯರ್ ಬಾಯ್ ಒಬ್ಬರು ಫೋನ್ ಮಾಡಿ ಪಾರ್ಸಲ್ ಬಂದಿರುವುದಾಗಿ ಹೇಳಿದ್ದಾರೆ. ಆ ಪಾರ್ಸಲ್ ಒಳಗೆ ಐಫೋನ್ ಹಾಗೂ ಚಿನ್ನದ ನೆಕ್ಲೆಸ್ ಜೊತೆ ಮಾದಕ ವಸ್ತುಗಳು ಇವೆ ಎಂದು ಕೋರಿಯರ್ ಬಾಯ್ ಹೇಳಿದ್ದು, `ಅದು ನನ್ನದಲ್ಲ’ ಎಂದು ರೇಶ್ಮಾ ಕೇಣಿ ಅವರು ಉತ್ತರಿಸಿದ್ದಾರೆ. `ಹಾಗಾದರೆ, ನಿಮ್ಮ ಹೆಸರು-ವಿಳಾಸ ದುರುಪಯೋಗವಾಗಿದೆ. ಪೊಲೀಸ್ ದೂರು ಕೊಡಬೇಕು. ನಾನೇ ಪೊಲೀಸರಿಗೆ ಮಾಹಿತಿ ಕೊಡುವೆ’ ಎಂದು ಕೋರಿಯರ್ ಬಾಯ್ ಹೇಳಿದ್ದು, ಇದಕ್ಕೆ ರೇಶ್ಮಾ ಕೇಣಿ ಅವರು ತಲೆ ಅಲ್ಲಾಡಿಸಿದ್ದಾರೆ.
ಅದಾದ ನಂತರ ಮುಂಬೈ ಪೊಲೀಸ್ ಎಂಬ ಹೆಸರಿನಲ್ಲಿ ಖಾಕಿ ಬಟ್ಟೆ ಧರಿಸಿದ ವ್ಯಕ್ತಿಯೊಬ್ಬರು ರೇಶ್ಮಾ ಕೇಣಿ ಅವರಿಗೆ ವಿಡಿಯೋ ಕಾಲ್ ಮಾಡಿದ್ದಾರೆ. `ನಿಮ್ಮ ಹೆಸರಿನಲ್ಲಿ 2 ಕೋಟಿ ರೂ ಅಕ್ರಮ ಹಣ ವರ್ಗಾವಣೆ ಆಗಿದೆ. ಈಗ ಸಿಕ್ಕ ಪಾರ್ಸಲ್‌ನಲ್ಲಿಯೂ ಮಾದಕ ವಸ್ತುಗಳಿವೆ. ನಿಮ್ಮನ್ನು ಬಂಧಿಸುತ್ತೇವೆ’ ಎಂದು ಬೆದರಿಸಿದ್ದಾರೆ. ಆ ಐಫೋನ್, ನೆಕ್ಲೇಸ್ ಹಾಗೂ ಮಾದಕ ವಸ್ತು ನನ್ನದಲ್ಲ’ ಎಂದು ರೇಶ್ಮಾ ಕೇಣಿ ಅವರು ಹೇಳಿದ್ದಾರೆ. `ಅಕ್ರಮ ಹಣ ವರ್ಗಾವಣೆಯಿಂದ ನಿಮ್ಮ ಖಾತೆಗೆ 10 ಲಕ್ಷ ರೂ ಕಮಿಶನ್ ಜಮಾ ಆಗಿದೆ. ಈ ಬಗ್ಗೆ ಇಡಿ ಹಾಗೂ ಸಿಐಡಿ ತನಿಖೆ ನಡೆಸಬೇಕು’ ಎಂದು ಪೊಲೀಸ್ ವೇಷದ ಅಧಿಕಾರಿ ಹೇಳಿದ್ದಾರೆ.
`ನಿಮ್ಮ ಮನೆಯಲ್ಲಿ ಮತ್ತೆ ಯಾರಿದ್ದಾರೆ?’ ಎಂದು ಆ ಪೊಲೀಸ್ ವೇಷದಾರಿ ಪ್ರಶ್ನಿಸಿದ್ದು, ರೇಶ್ಮಾ ಕೇಣಿ ಅವರು ಒಂಟಿಯಾಗಿರುವುದನ್ನು ಗಮನಿಸಿ ಇನ್ನಷ್ಟು ಬೆದರಿಸಿದ್ದಾರೆ. ಕೊನೆಗೆ `ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ಸರ್ಕಾರಕ್ಕೆ ಕೊಡಬೇಕು. ತನಿಖೆ ಮುಗಿದ ನಂತರ ನೀವು ತಪ್ಪಿತಸ್ಥರಲ್ಲ ಎಂದು ಸಾಭೀತಾದರೆ ಹಣ ಮರಳಿಸುತ್ತೇವೆ’ ಎಂದು ಪೊಲೀಸ್ ವೇಷದಾರಿ ಹೇಳಿದ್ದು, ಅದಕ್ಕೆ ಒಪ್ಪಿದ ರೇಶ್ಮಾ ಕೇಣಿ ಅವರು ಏಪ್ರಿಲ್ 9ರವರೆಗೆ ಹಂತಹoತವಾಗಿ 9.94 ಲಕ್ಷ ರೂ ವರ್ಗಾವಣೆ ಮಾಡಿದ್ದಾರೆ. ಅದಾದ ನಂತರ ಫೋನ್ ಮಾಡಿದವರು ಪೊಲೀಸರಲ್ಲ ಎಂದು ಗೊತ್ತಾಗಿದೆ. ಹಣ ಕಳೆದುಕೊಂಡ ರೇಶ್ಮಾ ಕೇಣಿ ಅವರು ಡಿಜಿಟಲ್ ಅರೆಸ್ಟ್’ಗೆ ಒಳಗಾಗಿದ್ದು, ಆ ಹಣ ಮರಳಿ ಕೊಡಿಸುವಂತೆ ನೈಜ ಪೊಲೀಸರ ಮೊರೆ ಹೋಗಿದ್ದಾರೆ.