ಭಟ್ಕಳದ ವೆಂಕ್ಟಾಪುರ ಸೇತುವೆ ಸಮೀಪ ಕಾರುಗಳ ನಡುವೆ ಭೀಕರ ಅಪಘಾತ ನಡೆದಿದೆ. ಕಾರಿನಲ್ಲಿದ್ದವರು ಸೀಟ್ ಬೆಲ್ಟ್ ಧರಿಸಿದ ಕಾರಣ ತಕ್ಷಣ ಏರ್ ಬ್ಯಾಗ್ ತೆರೆದುಕೊಂಡಿದ್ದು, ಪ್ರಯಾಣಿಕರ ಪ್ರಾಣ ಉಳಿದಿದೆ.
ಭಟ್ಕಳದಿಂದ ಹೊನ್ನಾವರದ ಕಡೆಗೆ ಸ್ವಿಫ್ಟ್ ಡಿಸೈರ್ ಕಾರು ಚಲಿಸುತ್ತಿತ್ತು. ಮತ್ತೊಂದು ಕಾರು ಭಟ್ಕಳದ ಕಡೆ ಬರುತ್ತಿತ್ತು. ಎರಡು ಕಾರಿನ ವೇಗ ಅತಿಯಾಗಿದ್ದು, ವೆಂಕ್ಟಾಪುರ ಸೇತುವೆ ಸಮೀಪ ಪರಸ್ಪರ ಡಿಕ್ಕಿಯಾಯಿತು. ಹಾವೇರಿ ಮೂಲದ ಬೀಮಪ್ಪ ಹನುಮಂತಪ್ಪ ಗಣಜೂರು ಅವರ ಸ್ವಿಫ್ಟ್ ಡಿಸೈರ್ ಕಾರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಮಾರುತಿ ಸ್ವಿಫ್ಟ್ ಕಾರಿಗೆ ಜೋರಾಗಿ ಗುದ್ದಿತು.
ಅಪಘಾತದ ತೀವೃತೆಗೆ ಎರಡು ಕಾರು ಜಖಂ ಆಯಿತು. ಆ ವೇಳೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದರು. ಅದಾಗಿಯೂ, ಕಾರಿನಲ್ಲಿದ್ದ ಮೊಹಮ್ಮದ್ ಮುಶಾಫರ್ (26), ಫೌಜಿಯಾ ಎ, ಮೊಹಮ್ಮದ್ ಅಶ್ರಫ್ (29), ಮೊಹಮ್ಮದ್ ಅಶ್ರಫ್ ಇಸ್ಮಾಯಿಲ್ (34), ಅಬ್ದುಲ್ ಖಾದರ್ ಅಜ್ವಲ್ (21) ಹಾಗೂ ಮೊಹಮ್ಮದ್ ಅಸ್ಥಾನ್ (19) ಗಾಯಗೊಂಡು ಆಸ್ಪತ್ರೆ ಸೇರಿದರು.