ಶಿರಸಿ ಹುಸುರಿ ಬಳಿಯ ಭದ್ರಾಪುರದ ನೂರ್ ಅಹ್ಮದ್ ಅವರು ಅರೆಕೊಪ್ಪ ಬಳಿಯಿರುವ ನವೀದ್ ಅಹ್ಮದ್ ಅವರ ತೋಟಕ್ಕೆ ನುಗ್ಗಿ 20 ಮಾವಿನ ಕಾಯಿ ಕದ್ದಿದ್ದಾರೆ. ಆದರೆ, ನವೀದ್ ಅಹ್ಮದ್ ಅವರು ತಮ್ಮ ತೋಟದಲ್ಲಿದ್ದ 50 ಮಾವಿನ ಕಾಯಿ ಕಳ್ಳತನವಾಗಿದೆ ಎಂದು ಪೊಲೀಸ್ ದೂರು ನೀಡಿದ್ದಾರೆ. ಇದೇ ವಿಷಯವಾಗಿ ನೂರ್ ಅಹ್ಮದ್ ಹಾಗೂ ನವೀದ್ ಅಹ್ಮದ್ ಅವರ ನಡುವೆ ಹೊಡೆದಾಟವೂ ನಡೆದಿದೆ.
ಶಿರಸಿ ಬಚಗಾಂವ್ ಬಳಿಯ ಅರೆಕೊಪ್ಪ ಹಿತ್ಲಗದ್ದೆಯಲ್ಲಿ ನವೀದ್ ಅಹ್ಮದ್ ಅಬ್ದುಲ್ ಜಾಬರ್ ಶೇಖ್ ಅವರು ವಾಸವಾಗಿದ್ದಾರೆ. ಬಚಗಾಂವದಲ್ಲಿ ಅವರು ಅಡಿಕೆ ತೋಟಹೊಂದಿದ್ದು, ಆ ತೋಟದ ಅಂಚಿನಲ್ಲಿ ಮಲ್ಲಿಕಾ ಮಾವಿನ ಗಿಡಗಳನ್ನು ನೆಟ್ಟಿದ್ದಾರೆ. ಈ ವರ್ಷ ಆ ಗಿಡಗಳಿಗೆ ಅಲ್ಲಲ್ಲಿ ಮಾವಿನ ಕಾಯಿ ಬಿಟ್ಟಿದ್ದು, ನವೀದ್ ಅಹ್ಮದ್ ಅವರು ಆ ಕಾಯಿಯನ್ನು ಜೋಪಾನವಾಗಿ ಕಾಯ್ದಿರಿಸಿಕೊಂಡಿದ್ದರು. ಆದರೆ, ನವೀದ್ ಅವರು ಅಲ್ಲಿರದ ವೇಳೆ ಹುಸುರಿ ಭದ್ರಾಪುರದ ನೂರ್ ಅಹ್ಮದ್ ಮಹಮದ್ ಗೌಸ್ ಅವರು ಅಲ್ಲಿಗೆ ಆಗಮಿಸಿದ್ದರು. ಮಲ್ಲಿಕಾ ಮಾವಿನ ಕಾಯಿಗಳ ಮೇಲೆ ಆಸೆಪಟ್ಟ ಅವರು 20 ಕಾಯಿಗಳನ್ನು ಕೊಯ್ದು ಅದನ್ನು ಹೊತ್ತೊಯ್ದರು.
ಶಿರಸಿ ಅರೆಕೊಪ್ಪದ ಜುಬ್ಬಾರ್ ಶೇಖ್, ಜಯೀದ್ ಜುಬ್ಬಾರ್ ಶೇಖ್ ಹಾಗೂ ಮತ್ತೊಬ್ಬರು ಈ ಮಾವಿನ ಕಾಯಿ ಕಳ್ಳತನವನ್ನು ದೂರದಿಂದ ನೋಡುತ್ತಿದ್ದರು. ತೋಟದಲ್ಲಿದ್ದ ಮಾವಿನ ಕಾಯಿಗಳನ್ನು ನೂರ್ ಅಹ್ಮದ್ ಕದ್ದಿರುವ ಬಗ್ಗೆ ಅವರೆಲ್ಲರೂ ಸೇರಿ ನವೀದ್ ಅಹ್ಮದ್ ಅವರ ಬಳಿ ಹೇಳಿದರು. ಇದರಿಂದ ಸಿಟ್ಟಾದ ನವೀದ್ ಅಹ್ಮದ್ ತಮ್ಮ ಸಹಚರರ ಜೊತೆ ನೂರ್ ಅಹ್ಮದ್ ಅವರನ್ನು ಅಡ್ಡಗಟ್ಟಿದರು. `ಅದೇನು ನಿಮ್ಮಪ್ಪನ ತೋಟವಾ?’ ಎಂದು ಪ್ರಶ್ನಿಸಿ ಅವರೆಲ್ಲರೂ ಸೇರಿ ನೂರ್ ಅಹ್ಮದ್ ಅವರಿಗೆ ಹಿಗ್ಗಾಮುಗ್ಗ ಥಳಿಸಿದರು. ಬಡಿಗೆಯಿಂದ ಬಡಿದರು.
`50 ಮಾವಿನ ಕಾಯಿ ಕಳ್ಳತನದಿಂದ 2500ರೂ ನಷ್ಟವಾಗಿದೆ’ ಎಂದು ನವೀದ್ ಅಹ್ಮದ್ ಅವರು ಪೊಲೀಸ್ ದೂರು ನೀಡಿದರು. `20 ಮಾವಿನ ಕಾಯಿ ಕದ್ದಿದಕ್ಕಾಗಿ ದೊಣ್ಣೆಯಿಂದ ಬಡಿದರು’ ಎನ್ನುವ ಬಗ್ಗೆ ನೂರ್ ಅಹ್ಮದ್ ಅವರು ಪೊಲೀಸ್ ದೂರು ದಾಖಲಿಸಿದರು. ಎರಡು ಕಡೆಯವರ ದೂರು ಆಲಿಸಿ, ಪ್ರಕರಣ ದಾಖಲಿಸಿದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಈ ಬಗ್ಗೆ ಉನ್ನತ ಮಟ್ಟದ ತನಿಖೆ ಶುರು ಮಾಡಿದ್ದಾರೆ. ನಿಜವಾಗಿಯೂ ಕಳ್ಳತನವಾದ ಮಾವಿನ ಕಾಯಿಗಳ ಸಂಖ್ಯೆ ಎಷ್ಟು? ಎಂದು ಈವರೆಗೂ ಗೊತ್ತಾಗಿಲ್ಲ.