ಕಾರವಾರದ ಖ್ಯಾತ ನ್ಯಾಯವಾದಿ ನಾಗರಾಜ ನಾಯಕ ಅವರು ಅಂಕೋಲಾ ವಂದಿಗೆ ಊರಿನ ಜನರ ಒಗ್ಗಟ್ಟು ಮುರಿಯುವ ಪ್ರಯತ್ನ ನಡೆಸಿದ ಬಗ್ಗೆ ವಂದಿಗೆಯ ನಾರಾಯಣ ನಾಯಕ ಅವರು ದೂರಿದ್ದಾರೆ. ಈ ವಿಷಯವಾಗಿ ಅವರು ನ್ಯಾಯಾಲಯದ ಮೊರೆ ಹೋಗಿ, ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದಾರೆ!
ಮೇ 6ರಂದು ಅಂಕೋಲಾದ ವಂದಿಗೆಯಲ್ಲಿ ಅಲ್ಲಿನ ವಿಠೋಬಾ ನಾಯಕ ಅವರು ಯಕ್ಷಗಾನ ಕಾರ್ಯಕ್ರಮ ಆಯೋಜಿಸಿದ್ದರು. ಆ ದಿನ ರಾತ್ರಿ ಯಕ್ಷಗಾನ ಸಭೆಯಲ್ಲಿ ನ್ಯಾಯವಾದಿ ನಾಗರಾಜ ನಾಯಕ ಅವರು ಭಾಷಣ ಮಾಡುತ್ತಿದ್ದರು. ಕೆಲವರು ಅವರ ಭಾಷಣ ವಿರೋಧಿಸಿದ್ದು, ಅದೇ ವಿಷಯ ದೊಡ್ಡದಾಗಿತ್ತು. ಅಲ್ಲಿ ನಡೆದ ವಾಗ್ವಾದದ ವಿರುದ್ಧ ನಾಗರಾಜ ನಾಯಕ ಅವರು ಒಂದು ವಾರಗಳ ಕಾಲ ಧರಣಿ ನಡೆಸಿದ್ದರು. ಐದು ದಿನ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದರು. ಆ ದಿನ ನಡೆದ ಗಲಾಟೆಗೆ ಗೃಹ ಸಚಿವ ಜಿ ಪರಮೇಶ್ವರ ಅವರ ಆಪ್ತ ಗೋಪಾಲಕೃಷ್ಣ ನಾಯಕ ಅವರೇ ಕಾರಣ ಎಂದು ದೂರಿದ್ದರು. ತಮ್ಮ ಮನವಿ ಆಲಿಸಲು ಗೃಹ ಸಚಿವರೇ ಆಗಮಿಸಬೇಕು ಎಂದು ನಾಗರಾಜ ನಾಯಕ ಅವರು ಪಟ್ಟುಹಿಡಿದಿದ್ದರು. ವಾರದ ನಂತರ ಅನೇಕರ ಒತ್ತಾಯದ ಮೇರೆಗೆ ನಾಗರಾಜ ನಾಯಕ ಅವರು ತಮ್ಮ ಧರಣಿ ಮುಗಿಸಿದ್ದು, ಅದರ ಬೆನ್ನಲ್ಲೇ ಅಂಕೋಲಾ ಪೊಲೀಸ್ ಠಾಣೆಯಲ್ಲಿ ನಾಗರಾಜ ನಾಯಕ ಅವರ ವಿರುದ್ಧ ಅಶಾಂತಿ ಮೂಡಿಸುವ ಪ್ರಯತ್ನ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ.
ನಾಗರಾಜ ನಾಯಕ ಅವರ ಜೊತೆ ಅವರ ಸಹಚರರಾದ ರೋಹನ ರಾಮದಾಸ ನಾಯಕ, ಪ್ರಶಾಂತ ರಾಮಚಂದ್ರ ನಾಯಕ ಹಾಗೂ ರಾಮಮೂರ್ತಿ ತಿಮ್ಮಣ್ಣ ನಾಯಕ ಅವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. `ಮೇ 6ರ ರಾತ್ರಿ ಅಂಕೋಲಾದ ವಂದಿಗೆಯಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದ್ದು, ಒಳ್ಳೆಯ ಕಾರ್ಯಕ್ಕೆ ಕೆಟ್ಟ ಹಿತಾಸಕ್ತಿಗಳ ಪ್ರವೇಶವಾಗದಿರಲು ನಿರ್ಧರಿಸಲಾಗಿತ್ತು. ಅದಾಗಿಯೂ, ಆ ನಿಶ್ಚಯದ ವಿರುದ್ಧವಾಗಿ ರೋಹನ ರಾಮದಾಸ ನಾಯಕ, ಪ್ರಶಾಂತ ರಾಮಚಂದ್ರ ನಾಯಕ ಹಾಗೂ ರಾಮಮೂರ್ತಿ ತಿಮ್ಮಣ್ಣ ನಾಯಕ ಸೇರಿ ಬಾಸಗೋಡಿನ ನಾಗರಾಜ ನಾಯಕ ಅವರನ್ನು ಕಾರ್ಯಕ್ರಮಕ್ಕೆ ಕರೆತಂದಿದ್ದಾರೆ. ಈ ಬಗ್ಗೆ ಯಕ್ಷಗಾನ ಆಯೋಜಕರಾದ ವಿಠೋಬಾ ನಾಯಕ ಅವರನ್ನು ಪ್ರಶ್ನಿಸಿದಾಗ ನಾಗರಾಜ ನಾಯಕ ಅವರು ತಮ್ಮನ್ನು ಕೆಟ್ಟದಾಗಿ ನಿಂದಿಸಿದ್ದಾರೆ’ ಎಂದು ವಂದಿಗೆಯ ನಾರಾಯಣ ಹರೀಶ ನಾಯಕ ಅವರು ದೂರಿದ್ದಾರೆ.
`ಊರಿನ ವಾತಾವರಣ ಹಾಳು ಮಾಡುವುದಕ್ಕಾಗಿ ಬಾಸಗೋಡಿನ ನಾಗರಾಜ ನಾಯಕ ಅವರನ್ನು ಕರೆಯಿಸಲಾಗಿದ್ದು, `ಗೋಪಾಲಕೃಷ್ಣ ನಾಯಕಗೆ ಆದ ಗತಿಯೇ ನಿಮಗೂ ಆಗುತ್ತದೆ’ ಎಂದು ನಾಗರಾಜ ನಾಯಕ ಅವರು ಬೆದರಿಸಿದ್ದಾರೆ’ ಎಂದು ಸಹ ನಾರಾಯಣ ಹರೀಶ ನಾಯಕ ಅವರು ವಿವರಿಸಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ಬಗ್ಗೆ ಶೋಧ ಶುರು ಮಾಡಿದ್ದಾರೆ.