ಕಾರವಾರದ ಪಾರ್ವತಿ ಶಂಕರ ಭವನದಲ್ಲಿ ಜೀಶಾನ ಹಾಗೂ ಜೀಬಾ ಅವರ ಮದುವೆ ನಡೆದಿದ್ದು, ಮದುವೆ ಮನೆಗೆ ಭೇಟಿ ನೀಡಿದ್ದ ಶಾಸಕ ಸತೀಶ್ ಸೈಲ್ ಅವರಿಗೆ ಕಡವಾಡ ಭಾಗದ ಮಕ್ಕಳು ಮುತ್ತಿಗೆ ಹಾಕಿದ್ದಾರೆ. `ತಮಗೆ ಆಟಿಕೆ ಸಾಮಗ್ರಿ ಕೊಡಿಸಿ’ ಎಂದು ಅವರು ಸತೀಶ್ ಸೈಲ್ ಅವರಲ್ಲಿ ಮನವಿ ಮಾಡಿದ್ದಾರೆ.
ಕಾರವಾರದ ಜೀಶಾನ ಹಾಗೂ ಗೋವಾದ ಜೀಬಾ ಅವರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಆ ಸಂಭ್ರಮದ ಅಂಗವಾಗಿ ದಂಪತಿ ಶುಕ್ರವಾರ ರಾತ್ರಿ ಪಾರ್ವತಿ ಶಂಕರ ಸಭಾಭವನದಲ್ಲಿ ಆರಕ್ಷತೆ ಸಮಾರಂಭ ಆಯೋಜಿಸಿದ್ದು, ಆ ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ಸೈಲ್ ಅವರು ಭಾಗಿಯಾಗಿದ್ದಾರೆ. ನವ ದಂಪತಿಗೆ ಶುಭಕೋರಿ ಊಟಕ್ಕೆ ಹೊರಟ ಸತೀಶ್ ಸೈಲ್ ಅವರನ್ನು ಅನೇಕ ಮಕ್ಕಳು ಹಿಂಬಾಲಿಸಿದ್ದಾರೆ. ಊಟಕ್ಕೆ ಕುಳಿತ ಶಾಸಕರನ್ನು ಸುತ್ತುವರೆದ ಮಕ್ಕಳು ತಮ್ಮ ಶಾಲೆಯ ಸಮಸ್ಯೆಯ ಬಗ್ಗೆ ವಿವರಿಸಿದ್ದಾರೆ.
`ಕಡವಾಡದ ಬೋವಿವಾಡದಲ್ಲಿ ಆಟ ಆಡಲು ಸಾಕಷ್ಟು ಸ್ಥಳಾವಕಾಶವಿದೆ. ಆದರೆ, ಆಟದ ಸಾಮಗ್ರಿಗಳಿಲ್ಲ. ಹೀಗಾಗಿ ಶಾಸಕರಾದ ತಾವು ನಮ್ಮ ಸಮಸ್ಯೆ ಆಲಿಸಿ, ಆಟದ ಸಾಮಗ್ರಿಗಳನ್ನು ಪೂರೈಸಿ’ ಎಂದು ಅವರು ಮನವಿ ಮಾಡಿದ್ದಾರೆ. `ಶಾಲಾ ಮಕ್ಕಳ ಅನುಕೂಲಕ್ಕಾಗಿ ಜೋಕಾಲಿ, ಜಾರುಗುಂಡಿ ಮೊದಲಾದ ಆಟಿಕೆ ಅಳವಡಿಸಿದರೆ ಅನುಕೂಲ’ ಎಂದವರು ಹೇಳಿದ್ದಾರೆ. ಮಕ್ಕಳ ಮಾತು ಕೇಳಿದ ಸತೀಶ್ ಸೈಲ್ ಆ ಕೂಡಲೇ ಆಟದ ಸಾಮಗ್ರಿ ಪೂರೈಸುವ ಆಶ್ವಾಸನೆ ನೀಡಿದ್ದಾರೆ
ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಈ ವೇಳೆ ಶಾಸಕ ಸತೀಶ್ ಸೈಲ್ ಅವರ ಜೊತೆಗಿದ್ದು, ಶಾಲೆಗೆ ತಾವೂ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ. ಶಾಸಕರಲ್ಲಿ ಮನವಿ ಮಾಡಲು ಬಂದಿದ್ದ ಸಾನ್ವಿ ಉಮಾಕಾಂತ್ ಭೋವಿ, ಆರುಷ್ ರಾಹುಲ್ ಅಜರೇಕರ್, ಸಾತ್ವಿಕ್ ಉಮಾಕಾಂತ್ ಭೋವಿ, ತ್ರಿಷಾ ಅಂಬರೀಶ್ ಅಂಕೋಲೆಕರ ಹಾಗೂ ಶ್ರೀಧತ್ತ ದೀಪಕ್ ಕೇಣಿಕರ್ ಅವರು ಎರಡೆರಡು ನಾಯಕರಿಂದ ನೆರವಿನ ಭರವಸೆ ಸಿಕ್ಕಿದ್ದರಿಂದ ಖುಷಿಯಿಂದ ಮನೆಗೆ ಮರಳಿದ್ದಾರೆ.