ಭಾರತದ ಮೇಲೆ 17 ಬಾರಿ ದಾಳಿ ಮಾಡಿದ ಮಹಮದ್ ಘಜ್ನಿ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿದ್ದು, ಸದ್ಯ ಅಂಕೋಲಾದ ಮಂಜು ನಾಯ್ಕ ಅವರು ಸಹ ಅದೇ ದಾರಿ ಹಿಡಿದಿದ್ದಾರೆ. ಅಗಸೂರಿನ ಜನ ನಿತ್ಯವೂ ಪೂಜಿಸಿ-ಆರಾಧಿಸುವ ಮೂರು ದೇವಾಲಯದ ಮೂರ್ತಿಯನ್ನು ಮಂಜು ನಾಯ್ಕ ಅವರು ವಿರೂಪಗೊಳಿಸಿದ್ದಾರೆ!
ಅಂಕೋಲಾದ ಅಗಸೂರು ಗ್ರಾಮದಲ್ಲಿ ಶಾಂತಿಕಾ ಪರಮೇಶ್ವರಿ ದೇವಸ್ಥಾನ, ಈಶ್ವರ ದೇವಸ್ಥಾನ ಹಾಗೂ ಸಣ್ಣಹೊಸಬ ದೇವಸ್ಥಾನವಿದೆ. ನಿತ್ಯ ಅನೇಕ ಭಕ್ತರು ಇಲ್ಲಿ ಆಗಮಿಸಿ ಪೂಜೆ ಮಾಡುತ್ತಾರೆ. ಅತ್ಯಂತ ಭಕ್ತಿಯಿಂದ ಜನ ಇಲ್ಲಿ ಬೇಡಿಕೊಳ್ಳುತ್ತಿದ್ದು, ಭಕ್ತರನ್ನು ದೇವರು ಎಂದಿಗೂ ಕೈ ಬಿಟ್ಟಿಲ್ಲ ಎಂಬ ನಂಬಿಕೆಯಿದೆ. ಆದರೆ, ದೇವರನ್ನು ನಂಬದ ಶಿರಗುಂಜಿ ಉಳಗದ್ದೆಯ ಮಂಜು ಸೋಮು ನಾಯ್ಕ ಅವರು ಆ ದೇವಾಲಯಗಳಿಗೆ ನುಗ್ಗಿ ದೇವರ ಮೂರ್ತಿಗಳನ್ನು ಹಾಳು ಮಾಡಿದ್ದಾರೆ.
ಮೇ 23ರ ರಾತ್ರಿ 8.30ರ ನಂತರ ಶಾಂತಿಕಾ ಪರಮೇಶ್ವರಿ ದೇವಸ್ಥಾನ ಪ್ರವೇಶಿಸಿದ ಮಂಜು ನಾಯ್ಕ ಅವರು ಅಲ್ಲಿದ್ದ ದೇವರನ್ನು ವಿರೂಪಗೊಳಿಸಿದ್ದು, ಅದಾದ ನಂತರ ಈಶ್ವರ ದೇವಸ್ಥಾನ ಹಾಗೂ ಸಣ್ಣಹೊಸಬ ದೇವಸ್ಥಾನಕ್ಕೂ ತೆರಳಿ ರಂಪಾಟ ಮಾಡಿದ್ದಾರೆ. ರಾತ್ರಿ 10.30ರವರೆಗೆ ಅವರು ದೇವರ ವಿಗ್ರಹಗಳನ್ನು ಬಿನ್ನ ಮಾಡುವ ಮೂಲಕ ಜನರ ಧಾರ್ಮಿಕ ಭಾವನೆಯನ್ನು ಕದಡಿದ್ದಾರೆ. ಆ ಮೂರ್ತಿಗಳನ್ನು ನಾಶಪಡಿಸುವ ಪ್ರಯತ್ನವನ್ನು ಮಾಡಿದ್ದು, ಮಂಜು ನಾಯ್ಕ ಅವರಿಂದ ಅದು ಸಾಧ್ಯವಾಗಿಲ್ಲ.
ಅಗಸೂರಿನ ಶಿಕ್ಷಕ ದೀಪಕ ನಾರಾಯಣ ನಾಯಕ ಅವರು ಮಂಜು ನಾಯ್ಕ ಅವರ ಈ ಕೃತ್ಯವನ್ನು ಘೋರವಾಗಿ ಖಂಡಿಸಿದ್ದಾರೆ. ಜನ ಪೂಜಿಸುವ ದೇವರನ್ನು ವಿರೂಪಗೊಳಿಸಿದ ಮಂಜು ನಾಯ್ಕ ಅವರ ವಿರುದ್ಧ ಕಾನೂನು ಕ್ರಮಕ್ಕಾಗಿ ಅವರು ಆಗ್ರಹಿಸಿದ್ದಾರೆ. ಅಂಕೋಲಾ ಪೊಲೀಸರು ಈ ಬಗ್ಗೆ ದೂರು ಸ್ವೀಕರಿಸಿದ್ದು, ವಿಚಾರಣೆ ಶುರು ಮಾಡಿದ್ದಾರೆ.