ಮುರ್ಡೇಶ್ವರದಲ್ಲಿ ಮೂರು ವರ್ಷದ ಮಗು ಕಳ್ಳತನವಾಗಿದೆ. ಗಂಡ-ಹೆಂಡತಿ ನಡುವೆ ಮಲಗಿ ನಿದ್ರಿಸುತ್ತಿದ್ದ ಮಗುವನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ!
ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಶೋಭಾ ಕುಮಾರಿ (35) ಅವರು ಊರೂರು ತಿರುಗಿ ಗುಜುರಿ ಸಂಗ್ರಹಿಸಿ ಜೀವನ ನಡೆಸುತ್ತಿದ್ದಾರೆ. ಎರಡು ವಾರಗಳ ಹಿಂದೆ ಅವರು ಮುರ್ಡೇಶ್ವರಕ್ಕೆ ಬಂದು ರೈಲು ನಿಲ್ದಾಣದ ಸಮೀಪ ವಾಸವಾಗಿದ್ದು, ರಸ್ತೆ ಬದಿಯಲ್ಲಿರುವ ಅಂಗಡಿಯೊಂದರ ಮುಂದೆ ರಾತ್ರಿ ಮಲಗುತ್ತಿದ್ದರು. ಮೇ 28ರ ರಾತ್ರಿ ಊಟ ಮುಗಿಸಿದ ಬಳಿಕ ಶೋಭಾ ಕುಮಾರಿ ಅವರು ತಮ್ಮ ಪತಿ ಹಾಗೂ ಪುತ್ರನೊಂದಿಗೆ ರಾತ್ರಿ 11 ಗಂಟೆ ಸುಮಾರಿಗೆ ಮಲಗಿದ್ದರು. ಮಗುವನ್ನು ದಂಪತಿ ತಮ್ಮ ಮಧ್ಯದಲ್ಲಿ ಮಲಗಿಸಿಕೊಂಡಿದ್ದರು.
ಮುಂಜಾನೆ ಸುಮಾರು 3 ಗಂಟೆಗೆ ಎಚ್ಚರವಾದಾಗ ಮಗು ತಮ್ಮ ಮಧ್ಯದಲ್ಲೇ ಮಲಗಿರುವುದನ್ನು ಶೋಭಾ ಕುಮಾರಿ ಅವರು ಗಮನಿಸಿದ್ದರು. ಆದರೆ, ಬೆಳಿಗ್ಗೆ ಸುಮಾರು 6 ಗಂಟೆಗೆ ಮತ್ತೆ ಎಚ್ಚರವಾದಾಗ ಮಗು ಕಾಣೆಯಾಗಿತ್ತು. ಬಳಿಕ ಸುತ್ತಮುತ್ತ ಎಲ್ಲೆಡೆ ಹುಡುಕಾಟ ನಡೆಸಿದರೂ ಮಗುವಿನ ಸುಳಿವು ಸಿಗಲಿಲ್ಲ.
ದಂಪತಿ ಜೊತೆ ಮಗುವೂ ಗಾಢ ನಿದ್ರೆಯಲ್ಲಿದ್ದ ವೇಳೆ ಅಪರಿಚಿತರು ಮಗುವನ್ನು ಅಪಹರಿಸಿ ಕೊಂಡೊಯ್ದಿರುವ ಸಾಧ್ಯತೆ ಇದೆ ಎಂದು ಶೋಬಾ ಕುಮಾರಿ ಅವರು ಹೇಳಿದ್ದಾರೆ.