ಅಂಕೋಲಾ ಕಾಕರಮಠದ ವಿಠೋಬ ಕೃಪಾ ಸಭಾಮಂಟಪದಲ್ಲಿ ಕನ್ನಡ ವೈಶ್ಯ ವಿದ್ಯಾನಿಧಿಯ 109ನೇ ‘ವಾರ್ಷಿಕ ಮಹಸಭೆ’ ಮತ್ತು ವಾರ್ಷಿಕೋತ್ಸವ ಸಮಾರಂಭ’ ನಡೆದಿದೆ.
ಸರ್ವೋಚ್ಛ ನ್ಯಾಯಾಲಯದ ನ್ಯಾಯವಾದಿ ಗುರುದತ್ತ ಅಂಕೋಲೆಕರ್ ಕಾರ್ಯಕ್ರಮ ಉದ್ಘಾಟಿಸಿ, ಅಢಾವೆ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ್ದಾರೆ ‘ಸಮಾಜ ಬಾಂಧವರು ವೈಶ್ಯ ಸಮಾಜದ ಹಿನ್ನೆಲೆ ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಭಾಷೆ, ರೂಢಿ, ಸಂಪ್ರದಾಯ, ಮೌಲ್ಯಗಳು ಬದಲಾಗದಂತೆ ಅನುಸರಿಸಿಕೊಂಡು ಹೋಗಬೇಕು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ನೀಡುವದರಿಂದ ಭವಿಷ್ಯದ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಉನ್ನತ ಹುದ್ದೆಗೆ ಏರಲು ಸಹಾಯಕಾರಿಯಾಗಲಿದೆ’ ಎಂದವರು ಹೇಳಿದ್ದಾರೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಂಬೈ ಉಚ್ಛ ನ್ಯಾಯಾಲಯದ ನ್ಯಾಯವಾದಿ ನಾಗರಾಜ ವೆಂಕಟೇಶ ಹೊಸ್ಕೇರಿ ಮಾತನಾಡಿ ‘ನನ್ನ ತಾಯಿಯ ಶಿಸ್ತಿನ ಜೀವನವೆ ನನಗೆ ಮಾದರಿ. ಆದರ್ಶ, ಕ್ರಿಯಾಶೀಲತೆ, ಮಾನವೀಯ ಮೌಲ್ಯಗಳು ಇವು ತಾಯಿಯಿಂದ ತಮಗೆ ಬಂದ ಸಂಸ್ಕಾರ’ ಎಂದು ಸ್ಮರಿಸಿದರು.
ಮಂಗಳೂರಿನ ಎನ್.ಎಂ.ಪಿ.ಎ ಮುಖ್ಯ ವೈದ್ಯಾಧಿಕಾರಿ ಡಾ.ಸುರೇಖಾ ನಾಗರಾಜ ಹೊಸ್ಕೇರಿ ಮಾತನಾಡಿ ‘ವಾರ್ಷಿಕೋತ್ಸವ ಎಂದರೆ ಕೇವಲ ಒಂದು ಆಚರಣೆ ಅಷ್ಟೇ ಅಲ್ಲ, ಇದು ವರ್ಷಪೂರ್ವ ವಿದ್ಯಾರ್ಥಿಗಳ ಶ್ರಮ ಮತ್ತು ಪ್ರತಿಭೆಯ ಪ್ರತಿಬಿಂಬವಾಗಿದೆ. ವಿದ್ಯಾರ್ಥಿಗಳಲ್ಲಿರುವ ಆತ್ಮವಿಶ್ವಾಸ, ಉತ್ಸಾಹ, ಸೃಜನಶೀಲತೆ ನೋಡಿದಾಗ ತುಂಬಾ ಸಂತೋಷ ಎನಿಸುತ್ತದೆ. ಇವತ್ತಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೇವಲ ಶಿಕ್ಷಣ ಪಡೆದರೆ ಸಾಲದು ಬಹುಮುಖಿ ಪ್ರತಿಭಾ ಸಂಪನ್ನರಾಗಬೇಕು’ ಎಂದರು.
ಕನ್ನಡ ವೈಶ್ಯ ವಿದ್ಯಾನಿಧಿಯ ಅಧ್ಯಕ್ಷ ಸಂಜೀವಕುಮಾರ ವೆಂಕಟೇಶ ಹೊಸ್ಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ ‘ನಮ್ಮದು ಸಮಾಜ ಚಿಕ್ಕ ಸಮಾಜವಾದರೂ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ನಮ್ಮಲ್ಲಿ ಇದ್ದಾರೆ. ಸಮಾಜ ಬಾಂಧವರು ಎಲ್ಲರೂ ಒಂದುಗೂಡಿ ಪ್ರತಿಭೆಗಳನ್ನು ಒಟ್ಟುಗೂಡಿಸಿ ಎಲ್ಲರನ್ನು ಮುಖ್ಯ ವಾಹಿನಿಗೆ ತರುವಂತಹ, ಯಾವುದೇ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ವಿದ್ಯಾನಿಧಿಯ ಜವಾಬ್ದಾರಿಯಾಗಿದೆ’ ಎಂದರು.
ಈ ಸಂದರ್ಭದಲ್ಲಿ ಗುರುದತ್ತ ಅಂಕೋಲೆಕರ್, ಸವಿತಾ ಅಂಕೋಲೆಕರ್, ನಾಗರಾಜ ಹೊಸ್ಕೇರಿ, ಸುರೇಖಾ ಹೊಸ್ಕೇರಿ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಜನ ಸಾಧಕರನ್ನು ಸನ್ಮಾನಿಸಲಾಯಿತು. SSLC, PUC ಯಲ್ಲಿ ಪ್ರಥಮ ಸ್ಥಾನಗಳಿಸಿದ, ಶೇಕಡಾ 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಹಾಗೂ ಉನ್ನತ ವ್ಯಾಸಂಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಕ್ರೀಡಾ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದವರನ್ನು ಪುರಸ್ಕರಿಲಾಯಿತು. ಸಮಾಜದ ಹಿರಿಯ ದಂಪತಿಗಳನ್ನು ಗೌರವಿಸಲಾಯಿತು.
ವಿದ್ಯಾನಿಧಿಯ ವಾರ್ಷಿಕ ಮಹಾಅಧಿವೇಶನದಲ್ಲಿ ಒಂದು ಕೋಟಿ ಎರಡು ಲಕ್ಷಕ್ಕೂ ಅಧಿಕ ಆಯ-ವ್ಯಯವನ್ನು ಮಂಡಿಸಲಾಯಿತು. ವಿದ್ಯಾನಿಧಿಗೆ ಶಾಸನಬದ್ಧವಾಗಿ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯಿತು. ರಮೇಶ ನಾಯ್ಕ ನೇತೃತ್ವದ ತಂಡದವರು ನಿರ್ದೇಶಕರ ಆಯ್ಕೆ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಿದರು.
ಸತೀಶ ಪದ್ಮನಾಭ ಶೆಟ್ಟಿ ಮಹಾಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ವಿಠ್ಠಲ ದುರ್ಗ ಶೆಟ್ಟಿ, ಗಣಪತಿ ಹನುಮಂತ ಶೆಟ್ಟಿ, ವೆಂಕಟೇಶ ಗಜಾನನ ಕಾಕರಮಠ, ಸಂತೋಷ ನಾಗಪ್ಪ ಬಂಡಿಕಟ್ಟೆ, ಮಹೇಶ ದತ್ತಾತ್ರೇಯ ಶೆಟ್ಟಿ, ಸ್ಥಾನಿಕ ಲೆಕ್ಕ ತಪಾಸಕ ಶ್ರೀನಿವಾಸ ದಾಮೋದರ ಶೆಟ್ಟಿ ಉಪಸ್ಥಿತರಿದ್ದರು. ಶ್ರೇಯಾ ಶ್ರೀನಿವಾಸ ಶೆಟ್ಟಿ ಪ್ರಾರ್ಥಿಸಿದರು. ಉಪಾಧ್ಯಕ್ಷ ಅಶೋಕ ಶಾಂಬಾ ಶೆಟ್ಟಿ ಸ್ವಾಗತಿಸಿದರು. ಶ್ರೀನಿವಾಸ ದಾಮೋದರ ಶೆಟ್ಟಿ ವಾರ್ಷಿಕ ವರದಿಯನ್ನು ಮಂಡಿಸಿದರು. ನಿರ್ದೇಶಕಿ ಗೀತಾ ಗುರುನಾಥ ಶೆಟ್ಟಿ, ಕಾರ್ಯದರ್ಶಿ ಗಿರೀಶ ರಮೇಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಸದಾನಂದ ರಾಮಯ್ಯ ಶೆಟ್ಟಿ ವಂದಿಸಿದರು.