ಉತ್ತರ ಕನ್ನಡ ಜಿಲ್ಲೆಯ ಅನೇಕ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳೇ ಮುಂದೆ ಸಾಗುತ್ತಿಲ್ಲ. ಕಾರಣ, ಅನೇಕ ಕಚೇರಿಗಲ್ಲಿ ಸೂಕ್ತ ಸಿಬ್ಬಂದಿಯೇ ಇಲ್ಲ!
ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಗಳಲ್ಲಿ ಜನಪ್ರತಿನಿಧಿಗಳ ಆಯ್ಕೆಗೆ ಸರಕಾರ ಸಂಪೂರ್ಣ ನಿರ್ಲಕ್ಷ್ಯ ತೋರಿದೆ. ಈ ನಡುವೆ ಸರಕಾರ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡದ ಕಾರಣ ಸಿಬ್ಬಂದಿ ಕೊರತೆ ಸೃಷ್ಟಿಯಾಗಿದೆ. ಇದರಿಂದ ಆಗಬೇಕಾದ ಕೆಲಸ ನಿಧಾನವಾಗಿದೆ. ಅಭಿವೃದ್ಧಿ ಕಾರ್ಯಗಳು ಹಿನ್ನಡೆ ಅನುಭವಿಸಿವೆ.
ಭೌಗೋಳಿಕವಾಗಿ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಉತ್ತರ ಕನ್ನಡದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ ಕಾರ್ಯ ನಿರ್ವಹಣೆಗೆ ಸಿಬ್ಬಂದಿ ಕೊರತೆ ತೀವೃವಾಗಿದೆ. ಬಹುತೇಕ ಹುದ್ದೆಗಳನ್ನು ಖಾಲಿ ಅಥವಾ ಹೆಚ್ಚುವರಿ ಜವಾಬ್ದಾರಿಯ ಮೇಲೆ ನಿರ್ವಹಿಸಲಾಗುತ್ತಿದೆ.
ಜಿಲ್ಲಾ ಪಂಚಾಯತದಲ್ಲಿ ಒಟ್ಟು 131ಹುದ್ದೆಗಳು ಮಂಜೂರಾಗಿದ್ದು, ಇಲ್ಲಿರುವ ಸಿಬ್ಬಂದಿಯ ಸಂಖ್ಯೆ ಕೇವಲ 30. ಬರೀ ಜಿಲ್ಲಾ ಪಂಚಾಯತದಲ್ಲಿಯೇ 101 ಹುದ್ದೆಗಳು ಖಾಲಿ ಇವೆ. ಗ್ರೂಪ್ ಎ ಶ್ರೇಣಿಯ ಪ್ರಮುಖ ಹುದ್ದೆಗಳಾದ ಮುಖ್ಯ ಯೋಜನಾಧಿಕಾರಿ, ಯೋಜನಾ ಮೌಲ್ಯಮಾಪನಾಧಿಕಾರಿ ಮತ್ತು ಸಹಾಯಕ ಹುದ್ದೆಗಳಿಗೆ ಅಧಿಕಾರಿಗಳೇ ಇಲ್ಲ. ಗ್ರೂಪ್ ಸಿ ವಿಭಾಗದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.
ಜೊತೆಗೆ 14 ಶೀಘ್ರಲಿಪಿಗಾರರ ಹುದ್ದೆಗಳು ಸಂಪೂರ್ಣವಾಗಿ ಖಾಲಿ ಇವೆ. 23 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಪೈಕಿ ಕೇವಲ 3 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 13 ಬೆರಳಚ್ಚುಗಾರರ ಹುದ್ದೆಗಳಿಗೆ ಒಬ್ಬರೂ ಸಿಬ್ಬಂದಿ ಇಲ್ಲ. 17 ಪ್ರಥಮ ದರ್ಜೆ ಸಹಾಯಕ ಹುದ್ದೆಗಳಲ್ಲಿ ಕೇವಲ 4 ಮಂದಿ ಕೆಲಸ ಮಾಡುತ್ತಿದ್ದಾರೆ. ತಾಲೂಕು ಪಂಚಾಯತಗಳ ಸ್ಥಿತಿ ಇದೆ. ಜಿಲ್ಲೆಯ 12 ತಾಲೂಕು ಪಂಚಾಯತಗಳ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಒಟ್ಟು 274 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ ಕೇವಲ 50 ಹುದ್ದೆಗಳಿಗೆ ಮಾತ್ರ ನೇಮಕಾತಿ ಆಗಿದೆ.
ಇನ್ನೂ 12 ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿಗಳಲ್ಲಿ ಕೇವಲ 6 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 12 ಸಹಾಯಕ ನಿರ್ದೇಶಕರ ಹುದ್ದೆಗಳ ಪೈಕಿ ಕೇವಲ 2 ಭರ್ತಿಯಾಗಿವೆ. 11 ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರ ಹುದ್ದೆಗಳ ಪೈಕಿ ಕೇವಲ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. 12 ತಾಲೂಕು ಯೋಜನಾಧಿಕಾರಿಗಳ ಹುದ್ದೆಗಳಲ್ಲಿ 10 ಹುದ್ದೆಗಳು ಖಾಲಿ ಇವೆ. ವಾಹನ ಚಾಲಕ, ಶೀಘ್ರಲಿಪಿಗಾರ, ಮತ್ತು ಬೆರಳಚ್ಚುಗಾರರಂತಹ ಗ್ರೂಪ್ ಸಿ ಹುದ್ದೆಗಳೂ ಭರ್ತಿಯಾಗಿಲ್ಲ.