ಪಾರ್ಶ್ವವಾಯು ಚಿಕಿತ್ಸೆಗಾಗಿ ಕಾರವಾರದ ಹಳಗಾಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಎರಡು ವಾರದ ಹಿಂದೆ ಯಲ್ಲಾಪುರದಲ್ಲಿ ಅಪಘಾತವಾಗಿದ್ದು, ಅಪಘಾತದ ನೋವು ಸಹಿಸಲಾಗದೇ ಅವರು ಸಾವನಪ್ಪಿದ್ದಾರೆ.
ಮೇ 18ರಂದು ಯಲ್ಲಾಪುರದ ಹೊಸಳ್ಳಿ ಕ್ರಾಸಿನ ಬಳಿ ಅಪಘಾತವೊಂದು ನಡೆದಿತ್ತು. ಕಾರು ಹಾಗೂ ಟ್ಯಾಂಕರ್ ನಡುವೆ ನಡೆದ ಡಿಕ್ಕಿಯಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೊಸೂರ ಗ್ರಾಮದ ರಾಮಪ್ಪ ಹಡಪದ (62) ಅವರು ಗಾಯಗೊಂಡಿದ್ದರು. ಪಾರ್ಶ್ವವಾಯು ಚಿಕಿತ್ಸೆಗಾಗಿ ಅವರು ಸಂಬAಧಿಕರ ಜೊತೆ ಹಳಗಾ ಗ್ರಾಮಕ್ಕೆ ತೆರಳುವಾಗ ಈ ದುರಂತ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಅಪಘಾತದಲ್ಲಿ ಎರ್ಟಿಗಾ ಕಾರು ಹಾಗೂ ಟ್ಯಾಂಕರ್ ಜಖಂ ಆಗಿದ್ದವು. ರಾಮಪ್ಪ ಹಡಪದ ಅವರಿಗೆ ಬೆನ್ನು ಮತ್ತು ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಅವರ ಜೊತೆಗಿದ್ದ ಮನೋಜಕುಮಾರ್ ಅವರಿಗೂ ಗಾಯಗಳಾಗಿದ್ದವು. ಗಾಯಗೊಂಡ ರಾಮಪ್ಪ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಹಾಗೂ ನಂತರ ಶಹಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಸಾವನಪ್ಪಿದ್ದಾರೆ.