ಮುಖದ ಮೇಲೆ ಆಸಿಡ್ ಚಲ್ಲಿದ ಪರಿಣಾಮ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಶಿರಸಿಯ ನವೀನ್ ಶೇಟ್ ಅವರನ್ನು ವೈದ್ಯರು ಕಷ್ಟಪಟ್ಟು ಬದುಕಿಸಿದ್ದು, ಅದಾದ ನಂತರ ನವೀನ್ ಶೇಟ್ ಅವರು ಸೀಮೆಎಣ್ಣೆ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಆಸಿಡ್ ಸುಟ್ಟ ನೋವಿಗಿಂತಲೂ ದೊಡ್ಡ ಪ್ರಮಾಣದ ಹಿಂಸೆ ಅನುಭವಿಸಿ ಅವರು ಸಾವನಪ್ಪಿದ್ದಾರೆ.
ಶಿರಸಿಯ ಉಂಚಳ್ಳಿ ಬಳಿ ನವೀನ್ ಮಂಜುನಾಥ ಶೇಟ್ (30) ಅವರು ಬಂಗಾರದ ಕೆಲಸ ಮಾಡುವಲ್ಲಿ ನೈಪೂಣ್ಯಹೊಂದಿದ್ದರು. ದುಡಿಮೆಗಾಗಿ ಮಹಾರಾಷ್ಟçಕ್ಕೆ ಹೋಗಿದ್ದ ಅವರು 9 ವರ್ಷಗಳ ಕಾಲ ಅಲ್ಲಿಯೇ ಇದ್ದರು. ಕೊಲ್ಲಾಪುರ ಬಳಿಯ ಕರಾಡದಲ್ಲಿ ಅವರು ಚಿನ್ನದ ಆಭರಣಗಳನ್ನು ಮಾಡಿ ಜೀವನ ನಡೆಸುತ್ತಿದ್ದರು. ಈಚೆಗೆ ಊರಿಗೆ ಬರುವಾಗ ಅವರು ಬೈಕ್ ಮೇಲೆ ಬಂದಿದ್ದು, ಅದೇ ಬೈಕಿನಲ್ಲಿ ಬಂಗಾರ ಶುದ್ಧಗೊಳಿಸುವ ಆಸಿಡ್’ನ್ನು ಹಿಡಿದು ತಂದಿದ್ದರು.
ಆದರೆ, ಬೈಕಿನಲ್ಲಿದ್ದ ಆಸಿಡ್ ಚೆಲ್ಲಿ ಅದು ನವೀನ್ ಶೇಟ್ ಅವರ ಮುಖಕ್ಕೆ ತಾಗಿತ್ತು. ಪರಿಣಾಮ ಅವರ ಮೂಗು, ಕೆನ್ನೆ ಸುಟ್ಟು ಗಾಯವಾಗಿತ್ತು. ಮುಖದ ಸ್ವರೂಪವೂ ಬದಲಾಗಿತ್ತು. ಇದರಿಂದ ಅವರು ಚಿಕಿತ್ಸೆಪಡೆದಿದ್ದು, ಮೂಗು ಸುಟ್ಟ ಪರಿಣಾಮ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ನವೀನ್ ಶೇಟ್ ಅವರನ್ನು ಕಾರವಾರ ಜಿಲ್ಲಾಸ್ಪತ್ರೆ ವೈದ್ಯರು ಬದುಕಿಸಿದ್ದರು. 9 ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಯಾದರೂ ಆಸಿಡ್ ತಾಗಿ ಮುಖ ಸುಟ್ಟ ನೋವಿನಲ್ಲಿಯೇ ನವೀನ್ ಶೇಟ್ ಅವರು ದಿನ ಕಳೆಯುತ್ತಿದ್ದರು.
ಹೀಗಿರುವಾಗ, ಜೂನ್ 1ರಂದು ನವೀನ್ ಶೇಟ್ ಅವರು ಹಾವೇರಿಗೆ ಹೋಗಿದ್ದರು. ಅಲ್ಲಿದ್ದ ಸಹೋದರನ ಮನೆಯಲ್ಲಿ ತಂಗಿದ್ದ ಅವರಿಗೆ ಅಲ್ಲಿ ಸೀಮೆಎಣ್ಣೆ ಕಾಣಿಸಿತು. ಜನವರಿ 2ರಂದು ಅವರು ಆ ಸೀಮೆಎಣ್ಣೆ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು. ಪರಿಣಾಮ ಇಡೀ ದೇಹ ಸುಟ್ಟು ಕರಕಲಾಯಿತು. ಕಷ್ಟಪಟ್ಟು ಮಗನಿಗೆ ಚಿಕಿತ್ಸೆ ಕೊಡಿಸಿದ್ದ ಕಸ್ತೂರಿ ಶೇಟ್ ಅವರು ಚಿಕಿತ್ಸೆ ನಂತರವೂ ಮಗ ಆತ್ಮಹತ್ಯೆಗೆ ಶರಣಾಗಿರುವುದನ್ನು ನೋಡಿ ಕಣ್ಣೀರಾದರು. ಈ ವಿಷಯದ ಬಗ್ಗೆ ಅವರೇ ಪೊಲೀಸರಿಗೆ ಮಾಹಿತಿ ನೀಡಿ, ಕಾನೂನು ಕ್ರಮಕ್ಕೆ ಮನವಿ ಮಾಡಿದರು.