ಬಂಗಾರದ ಒಡವೆ ಧರಿಸಿದ್ದ ಸವಿತಾ ನಾಯ್ಕ ಅವರು ಶಿರಸಿಗೆ ಬಂದಾಗ ಆ ಒಡವೆಯನ್ನು ಬ್ಯಾಗಿನಲ್ಲಿರಿಸಿಕೊಂಡಿದ್ದು, ಅದು ಕಳ್ಳರ ಪಾಲಾಗಿದೆ. ಜಂಗುಳಿಯಿoದ ಕೂಡಿದ್ದ ಶಿರಸಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿಯೇ ಕಳ್ಳರು ಕೈ ಚಳಕ ಪ್ರದರ್ಶಿಸಿದ್ದಾರೆ.
ಶಿವಮೊಗ್ಗ ಸೊರಬದ ಚಂದ್ರಗುತ್ತಿ ಬಳಿಯ ಕಲಕೋಡದಲ್ಲಿ ಸವಿತಾ ಆನಂದ ನಾಯ್ಕ ಅವರು ವಾಸವಾಗಿದ್ದಾರೆ. 40 ವರ್ಷದ ಅವರು ಜೂನ್ 3ರಂದು ಶಿರಸಿಗೆ ಆಗಮಿಸಿದ್ದರು. ಮಗ ಧೀರಜ ನಾಯ್ಕ, ಅಕ್ಕ ನಾಗರತ್ನ ಹಾಗೂ ಅಕ್ಕನ ಮಗಳ ಜೊತೆ ಅವರು ಯಲ್ಲಾಪುರ-ಮುಂಡಗೋಡ ರಸ್ತೆಯ ಅಡಿಕೆಸರ ಗ್ರಾಮದಿಂದ ಶಿರಸಿಗೆ ಬಂದಿದ್ದರು. ನೆಂಟರಮನೆಗೆ ಬರುವಾಗ ಅವರು ಬಂಗಾರ ಧರಿಸಿದ್ದ ಅವರು ಶಿರಸಿ ಪೇಟೆಗೆ ಬರುವಾಗ ಅದನ್ನು ತೆಗೆದು ಬ್ಯಾಗಿನಲ್ಲಿರಿಸಿಕೊಂಡಿದ್ದರು.
ಶಿರಸಿ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಅಕ್ಕ ನಾಗರತ್ನ ಅವರಿಗೆ ಬನವಾಸಿ ಬಸ್ ಹತ್ತಿಸಿದ ಬಳಿಕ ಸವಿತಾ ನಾಯ್ಕ ಅವರು ಬಸ್ ನಿಲ್ದಾಣದ ಒಳಗೆ ಕುಳಿತಿದ್ದರು. ನಂತರ ಮಗನಿಗೆ ತಿಂಡಿ ಕೊಡಿಸಲು ಬಸ್ ನಿಲ್ದಾಣದ ಬೇಕರಿಗೆ ತೆರಳಿದ್ದು, ಹಣ ಪಾವತಿಸಲು ವೆನಿಟಿ ಬ್ಯಾಗ್ ತೆರೆಯುವ ವೇಳೆ ಅದರಲ್ಲಿದ್ದ ಸ್ಟೀಲ್ ಬಾಕ್ಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿತು. ಆ ಬ್ಯಾಗಿನಲ್ಲಿದ್ದ ಚಿನ್ನಾಭರಣ ಹಾಗೂ ಮೊಬೈಲ್ ಜೊತೆ ಹಣವನ್ನು ಕಳ್ಳರು ದೋಚಿರುವುದು ಆಗ ಗೊತ್ತಾಯಿತು.
ಸವಿತಾ ನಾಯ್ಕ ಅವರ ಬಳಿಯಿದ್ದ 20 ಗ್ರಾಂ ತೂಕದ ಚಿನ್ನದ ಸರ, 10 ಗ್ರಾಂ ತೂಕದ ಕಿವಿಯ ಬೆಂಡೋಲೆ, ಸರಪಳಿ ಹಾಗೂ ಮಾಟಿ, ಕೀಪ್ಯಾಡ್ ಮೊಬೈಲ್ ಮತ್ತು 8 ಸಾವಿರ ರೂ ಹಣ ಸೇರಿ 1.59 ಲಕ್ಷ ರೂ ಮೌಲ್ಯದ ವಸ್ತುಗಳು ಕಳ್ಳರ ಪಾಲಾಗಿದೆ. ಪೊಲೀಸರು ಕಳ್ಳರ ಶೋಧ ನಡೆಸಿದ್ದಾರೆ.