ಶಿರಸಿಯಲ್ಲಿ ವಾಸವಾಗಿರುವ ವಿಧವೆಯ ಸ್ನೇಹ ಬೆಳೆಸಿದ ವ್ಯಕ್ತಿಯೊಬ್ಬ ಆಕೆಯ ಬಂಗಾರ ದೋಚಿದಲ್ಲದೇ, ಆ ವಿಧವೆಯ ತಂಗಿಯ ಮೇಲೆಯೂ ಅತ್ಯಾಚಾರ ನಡೆಸಿದ ಪ್ರಕರಣ ಪೊಲೀಸರ ಮುಂದೆ ಬಂದಿದೆ. 2023-24ರಲ್ಲಿ ನಡೆದ ಈ ವಿದ್ಯಮಾನ ಆಲಿಸಿದ ಪೊಲೀಸರು ಬಂಗಾರಪಡೆದು ಮೋಸ ಮಾಡಿದ ಕಾರಣ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೆಳಗಾವಿಯ ಸುಲ್ತಾನ ಸಾಬ್ ಅವರು 2023ರಲ್ಲಿ ಶಿರಸಿ ಎಪಿಎಂಸಿಯ ವಿದ್ಯಾಗಿರಿ ಬಳಿ ವಾಸವಾಗಿರುವ ಹಾವೇರಿಯ ಕುಟುಂಬವೊದರ ಸ್ನೇಹ ಬೆಳೆಸಿದ್ದರು. ಶೇರ್‌ಚಾಟ್’ನಲ್ಲಿ ಕೆಲಸ ಕೊಡಿಸುವುದಾಗಿ ಆ ಕುಟುಂಬದ ಹೆಣ್ಣು ಮಗಳನ್ನು ಬುಟ್ಟಿಗೆ ಬೀಳಿಸಿಕೊಂಡ ಸುಲ್ತಾನ ಸಾಬ್ ನಂತರ ಅವರ ಅಕ್ಕನ ಸ್ನೇಹವನ್ನು ಬೆಳೆಸಿದ್ದರು. ಈಗಾಗಲೇ ಪತಿ ಸಾವಿನಿಂದ ನೊಂದಿರುವ ಆ ಮಹಿಳೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ್ದರು. ಜೊತೆಗೆ ಕಡಿಮೆ ಬೆಲೆಯಲ್ಲಿ ಮನೆ ಕೊಡಿಸುವುದಾಗಿ ಹೇಳಿ ನಂಬಿಕೆ ಹುಟ್ಟಿಸಿದ್ದರು. `ತನಗೆ ರಾಜಕೀಯ ನಾಯಕರೆಲ್ಲರೂ ಆತ್ಮೀಯ’ ಎಂದು ಸುಲ್ತಾನ್ ಸಾಬ್ ಬಿಂಬಿಸಿಕೊAಡಿದ್ದರು. ಈ ಎಲ್ಲಾ ಕೆಲಸ ಹಾಗೂ ಭರವಸೆಗೆ ಬೆಳಗಾವಿಯ ರೇಖಾ ಗೌಡ ಎಂಬಾತರು ಜೊತೆಯಾಗಿದ್ದು, ಅವರು ಸಹ ಸುಲ್ತಾನ ಸಾಬ್ ಅವರ ಪರವಾಗಿ ಕೆಲಸ ಮಾಡಿದ್ದರು.
2024ರಲ್ಲಿ 4 ಬಾರಿ ಸುಲ್ತಾನ್ ಸಾಬ್ ಅವರು ನಾಲ್ಕು ಬಾರಿ ಆ ಮಹಿಳೆಯರಿಬ್ಬರ ಮನೆಗೆ ಬಂದು ಹೋಗಿದ್ದರು. ನಂತರ ಶಿರಸಿ ಜಾತ್ರೆಯಲ್ಲಿಯೂ ಅವರು ಕುಟುಂಬದವರ ಜೊತೆ ಸುತ್ತಾಡಿದ್ದರು. ಅದಾದ ನಂತರ ಕೆಲಸ ಕೊಡಿಸಲು ಹಣದ ಬೇಡಿಕೆಯಿಟ್ಟ ಅವರು 30 ಸಾವಿರ ರೂ ಪಡೆದಿದ್ದರು. ಅದಾಗಿ ಎರಡು ದಿನಕ್ಕೆ `ಶಿರಸಿ ಸಮಾರಂಭಕ್ಕೆ ಬರುವಾಗ ಬಂಗಾರದ ಒಡವೆ ಬಿಟ್ಟು ಬಂದಿದ್ದು, ನಿನ್ನ ಒಡವೆ ಕೊಡು’ ಎಂದು ಮಹಿಳೆಯನ್ನು ಕೇಳಿದ್ದರು. ಪತಿ ಮರಣದ ನಂತರ ಕಪಾಟಿನಲ್ಲಿರಿಸಿದ್ದ ಎಲ್ಲಾ ಒಡವೆಗಳನ್ನು ಆ ಮಹಿಳೆ ಸುಲ್ತಾನ್ ಸಾಬ್ ಅವರಿಗೆ ನೀಡಿದ್ದು, ಆ ಒಡವೆ ಮರಳಿ ಬರಲಿಲ್ಲ.
ಅದಾದ ನಂತರ ತನ್ನ ತಂಗಿಗೂ ಸುಲ್ತಾನ್ ಸಾಬ್ ಅಕ್ರಮ ಬಂಧನದಲ್ಲಿರಿಸಿ ಅತ್ಯಾಚಾರ ನಡೆಸಿರುವುದು ಆ ಮಹಿಳೆಗೆ ಅರಿವಾಯಿತು. ಕಿತ್ತೂರು ಪೊಲೀಸ್ ಠಾಣೆಯಲ್ಲಿ ತಂಗಿ ಪೊಲೀಸ್ ದೂರು ನೀಡಿರುವುದು ಗೊತ್ತಾಯಿತು. ಈ ಪ್ರಕರಣದ ವಿಚಾರಣೆಗೆ ಹೋದ ಮಹಿಳೆ ತಮಗಾದ ಅನ್ಯಾಯವನ್ನು ಸಹ ವಿವರಿಸಿದರು. ನಂಬಿಸಿ, ಮೋಸ ಮಾಡಿ ಲಕ್ಷಾಂತರ ರೂ ಮೌಲ್ಯದ ಬಂಗಾರ ಒಯ್ದಿದನ್ನು ದೂರಿದರು. `ಮನೆಯಲ್ಲಿ ಗೊತ್ತಾದರೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಪೊಲೀಸ್ ದೂರು ನೀಡಿರಲಿಲ್ಲ’ ಎಂದು ಆ ಮಹಿಳೆ ಇದೀಗ ದೂರಿದ್ದು, ಕುಟುಂಬಕ್ಕೆ ಅನ್ಯಾಯ ಮಾಡಿದ ಸುಲ್ತಾನ್ ಸಾಬ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.