ಶಾಲೆ ಹಾಗೂ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಕಲುಷಿತ ನೀರು ಕೊಟ್ಟರೆ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ ಹೇಳಿದ್ದಾರೆ. ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ನಡೆಸಿದ ಅವರು `ವಿದ್ಯಾರ್ಥಿ ನಿಲಯಗಳಿಗೆ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನ ಮೂಲ ಮತ್ತು ನೀರಿನ ಮಾದರಿಗಳನ್ನು ಪರೀಕ್ಷೆಗಳಿಗೆ ಒಳಪಡಿಸಬೇಕು’ ಎಂದು ಸೂಚಿಸಿದ್ದಾರೆ.
`ಮಕ್ಕಳಿಗೆ ಉತ್ತಮ ಗುಣಮಟ್ಟದ ನೀರು ಪೂರೈಕೆಯಾಗುವ ಬಗ್ಗೆ ನಿರಂತರವಾಗಿ ಎಚ್ಚರವಹಿಸಬೇಕು. ಹಾಸ್ಟೆಲ್ ನಿರ್ವಹಣೆ ಮಾಡುವ ಇಲಾಖೆಗಳ ಅಧಿಕಾರಿಗಳು ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದವರು ಸೂಚಿಸಿದ್ದಾರೆ. `ಎಲ್ಲಾ ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಕೂಡಾ ನೀರನ್ನು ಆಗಾಗ್ಗೆ ಗುಣಮಟ್ಟ ಪರೀಕ್ಷೆಗೆ ಒಳಪಡಿಸಬೇಕು’ ಎಂದು ನಿರ್ದೇಶನ ನೀಡಿದ್ದಾರೆ.
`ಹೊಸದಾಗಿ ಬೋರ್‌ವೆಲ್ ಗಳನ್ನು ಕೊರೆದ ನಂತರ ಅವುಗಳಿಗೆ ಜಲಮರುಪೂರಣ ವ್ಯವಸ್ಥೆಯನ್ನು ಒದಗಿಸುವ ಮೂಲಕ ಆ ಭಾಗದಲ್ಲಿ ಅಂರ್ತಜಲ ಅಭಿವೃದ್ದಿಯಾಗುವಂತೆ ಮಾಡಬೇಕು. ಬೋರ್‌ವೆಲ್ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು’ ಎಂದವರು ಹೇಳಿದರು. ಜಲ ಜೀವನ್ ಮಿಷನ್ ಯೋಜನೆಯಡಿ ಮಂಜೂರಾದ ಕಾಮಗಾರಿಗಳ ಅವಧಿ ವಿಸ್ತರಣೆ ಪ್ರಸ್ತಾವನೆಗಳ ಅನುಮೋದನೆ ಮತ್ತು 2026-27 ನೇ ಸಾಲಿನ ರೂ.139 ಲಕ್ಷ ದ ಟಾಸ್ಕ್ ಪೋರ್ಸ್ ಕ್ರಿಯಾ ಯೋಜನೆಗೆ ಈ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅಲ್ಲಾ ಭಕಷ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.