ಮೊನ್ನೆ ರಾತ್ರಿ ಮೀನು ತರಲು ಹೋಗಿದ್ದ ಅಂಕೋಲಾ ಹಿಲ್ಲೂರಿನ ಪ್ರಮೋದ ಹರಿಕಂತ್ರ ಒದೆ ತಿಂದು ಮನೆಗೆ ಮರಳಿದ್ದಾರೆ. ಹೆಬ್ರಿಗದ್ದೆಯ ದೀಪಕ ನಾಯಕ ಅವರ ಅಂಗಡಿ ಬಳಿಯಿದ್ದ ಹಿಲ್ಲೂರುಬೈಲಿನ ನಾಗರಾಜ ಗೌಡ ಅವರು ಪ್ರಮೋದ ಹರಿಕಂತ್ರ ಅವರ ಕೆನ್ನೆಗೆ ಬಾರಿಸಿ, ನಂತರ ಬಡಿಗೆಯಿಂದ ಬಡಿದಿದ್ದಾರೆ.
ಅಂಕೋಲಾ ಹಿಲ್ಲೂರಿನ ಕೊಳಗಿ ಬಳಿ ಪ್ರಮೋದ ಮಹಾಬಲೇಶ್ವರ ಹರಿಕಂತ್ರ (22) ಅವರು ವಾಸವಾಗಿದ್ದಾರೆ. ಹಿಲ್ಲೂರುಬೈಲಿನಲ್ಲಿ ನಾಗರಾಜ ಮೋನು ಗೌಡ (32) ಅವರು ಚಾಲಕರಾಗಿದ್ದಾರೆ. ಕಳೆದ ವರ್ಷ ಹೇಬ್ರಿಗದ್ದೆಯಲ್ಲಿ ಕೃಷ್ಣಮೂರ್ತಿ ವಿಸರ್ಜನೆ ವೇಳೆ ಗಲಾಟೆ ನಡೆದಿದ್ದು, ಆ ಗಲಾಟೆ ನಡೆದ ದಿನದಿಂದಲೂ ಪ್ರಮೋದ ಹರಿಕಂತ್ರ ಹಾಗೂ ನಾಗರಾಜ ಗೌಡ ಅವರ ನಡುವೆ ವೈಮನಸ್ಸು ಮೂಡಿದೆ. ಆ ದಿನ ನಾಗರಾಜ ಗೌಡ ಅವರು ಗಲಾಟೆ ಮಾಡುತ್ತಿರುವಾಗ ಪ್ರಮೋದ ಹರಿಕಂತ್ರ ಅವರು ಸಮಾಧಾನ ಮಾಡಲು ಬಂದಿರುವುದೇ ಅವರಿಬ್ಬರ ನಡುವಿನ ದ್ವೇಷಕ್ಕೆ ಕಾರಣವಾಗಿದೆ.
ಹೀಗಿರುವಾಗ ಜೂನ್ 3ರ ರಾತ್ರಿ 9.30ಕ್ಕೆ ಪ್ರಮೋದ ಹರಿಕಂತ್ರ ಅವರು ಮೀನು ತುರುವುದಕ್ಕಾಗಿ ಹೊರಟಿದ್ದಾರೆ. ಕಂಡಕುಳಿಗೆ ನಡೆದು ಹೋಗುತ್ತಿದ್ದ ಪ್ರಮೋದ ಹರಿಕಂತ್ರ ಅವರನ್ನು ಹೆಬ್ರಗದ್ದೆಯ ದೀಪಕ್ ನಾಗಪ್ಪ ನಾಯಕ ಅವರ ಅಂಗಡಿ ಬಳಿ ನಾಗರಾಜ ಗೌಡ ಅವರು ನೋಡಿದ್ದಾರೆ. ಈ ವೇಳೆ ನಾಗರಾಜ ಗೌಡ ಅವರು ದೂರದಿಂದಲೇ ಪ್ರಮೋದ ಹರಿಕಂತ್ರ ಅವರನ್ನು ಕೂಗಿ ಕರೆದಿದ್ದಾರೆ. ಹತ್ತಿರ ಬಂದ ಪ್ರಮೋದ ಹರಿಕಂತ್ರ ಅವರನ್ನು ಉದ್ದೇಶಿಸಿ `ನೀನೇನು ಹೀರೋನಾ?’ ಎಂದು ಪ್ರಶ್ನಿಸಿದ್ದಾರೆ. ಕಳೆದ ವರ್ಷದ ಘಟನೆ ನೆನಪಿಸಿ ಕಪಾಳ ಮೋಕ್ಷ ಮಾಡಿದ್ದಾರೆ.
ಅದಾದ ನಂತರ ಅಲ್ಲಿದ್ದ ಸೋಡಾ ಬಾಟಲಿ ಕರೆಂಟ್ ಕಂಬಕ್ಕೆ ಒಡೆದ ನಾಗರಾಜ ಗೌಡ ಅವರು ಆ ಮೊಚನಾದ ಬಾಟಲಿಯಿಂದ ಪ್ರಮೋದ ಹರಿಕಂತ್ರ ಅವರಿಗೆ ಚುಚ್ಚುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಪ್ರಮೋದ ಹರಿಕಂತ್ರ ಅವರು ತಪ್ಪಿಸಿಕೊಂಡಿದ್ದು, ಅಂಗಡಿ ಹಿಂದಿದ್ದ ರೀಪು ತಂದು ಅದರಿಂದ ದಾಳಿ ಮಾಡಿದ್ದಾರೆ. ನೋವುಂಡ ಪ್ರಮೋದ ಹರಿಕಂತ್ರ ಅವರು ನ್ಯಾಯ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದ್ದಾರೆ.