ಯಲ್ಲಾಪುರ-ಹುಬ್ಬಳ್ಳಿ ಮುಖ್ಯ ರಸ್ತೆಯಲ್ಲಿ ಭೀಕರ ಅಪಘಾತ ನಡೆದಿದೆ. ವೇಗವಾಗಿ ಚಲಿಸಿದ ಬೈಕು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ಬೈಕಿನಲ್ಲಿದ್ದ ವ್ಯಕ್ತಿಗಳಿಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಲ್ಲಿ ಒಬ್ಬರು ಸಾವು-ಬದುಕಿನ ಹೋರಾಟ ನಡೆಸಿದ್ದಾರೆ.
ಮಾಹಿತಿಯ ಪ್ರಕಾರ, ಬೈಕ್‌ನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದು ಅವರು ಎಡಬದಿ ಬದಲು ಬಲ ಬದಿಯಲ್ಲಿ ಸಂಚರಿಸುತ್ತಿದ್ದರು. ಎದುರಿನಿಂದ ಬರುತ್ತಿದ್ದ ಕಾರಿಗೆ ಆ ಬೈಕಿನವರು ಗುದ್ದಿದರು. ಅಪಘಾತದ ರಭಸಕ್ಕೆ ಕಾರು ಜಖಂ ಆಗಿದೆ. ಬೈಕ್ ಸಹ ನುಚ್ಚುನೂರಾಗಿದೆ. ಅಪಘಾತದ ರಭಸಕ್ಕೆ ಬೈಕಿನಲ್ಲಿದ್ದವರಿಬ್ಬರು ರಸ್ತೆ ಮೇಲೆ ಬಿದ್ದಿದ್ದಾರೆ. ಇಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಸ್ಥಳೀಯರೇ ಅವರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಗಾಯಗೊಂಡವರು ಕೇಬಲ್ ಸಂಪರ್ಕ ನಿರ್ವಹಣಾ ಕಾರ್ಯದಲ್ಲಿದ್ದವರಾಗಿದ್ದು, ಕೆಲಸ ಮುಗಿಸಿ ಮನೆಗೆ ಮರಳುವಾಗ ಈ ಅವಘಡ ನಡೆದ ಮಾಹಿತಿಯಿದೆ. ಅಪಘಾತದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ನಂತರ ಪೊಲೀಸರು ರಸ್ತೆ ಸಂಚಾರ ಸುಗಮಗೊಳಿಸಿದ್ದಾರೆ. ಗಾಯಗೊಂಡವರ ಹೆಸರು-ಮಾಹಿತಿ ಬಹಿರಂಗವಾಗಿಲ್ಲ.