ಪ್ರಕೃತಿಯ ವಿಹಂಗಮ ನೋಟ, ಕಾರವಾರಕ್ಕೆ ಕಲಶದಂತೆ ಇರುವ ಗುಡ್ಡಳ್ಳಿ, ಅಲ್ಲಿ ವಾಸಿಸುವ 25 ಕುಟುಂಬ. ಆದ್ರೆ ಗುಡ್ಡಳ್ಳಿ ಗ್ರಾಮಸ್ಥರು ಹಲವು ವರ್ಷಗಳಿಂದ ಪಕ್ಕಾ ರಸ್ತೆಯ ಕನಸು ಕಾಣುತ್ತಿದ್ದು, ಇಂದಿಗೂ ಅವರ ಪಾಲಿಗೆ ಕೆಸರುಮಯ ರಸ್ತೆ ಮತ್ತು ಸಂಚಾರದ ಸಂಕಷ್ಟವೇ ಉಳಿದಿದೆ. ಮಳೆಗಾಲ ಆರಂಭವಾದಾಗ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ಗ್ರಾಮಸ್ಥರ ದೈನಂದಿನ ಜೀವನವೇ ಅಸ್ತವ್ಯಸ್ತವಾಗುತ್ತಿದೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಳೆ ಬಂದಾಗ ರಸ್ತೆಯ ಮೇಲೆ ನೀರು ಹರಿದು ದೊಡ್ಡ ದೊಡ್ಡ ಗುಂಡಿಗಳು ಉಂಟಾಗುತ್ತವೆ. ಇದರಿಂದ ವಾಹನ ಸವಾರರು ಮಾತ್ರವಲ್ಲದೆ ಶಾಲಾ ಮಕ್ಕಳು, ವೃದ್ಧರು ಹಾಗೂ ರೋಗಿಗಳನ್ನು ಸಾಗಿಸುವುದೂ ಕಷ್ಟಕರವಾಗಿದೆ. ಕೆಲವೊಮ್ಮೆ ತುರ್ತು ವೈದ್ಯಕೀಯ ಸೇವೆ ಪಡೆಯುವುದೂ ಸವಾಲಾಗಿ ಪರಿಣಮಿಸುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಸ್ಥಳೀಯರ ಪ್ರಕಾರ, ಈ ರಸ್ತೆಯ ಅಭಿವೃದ್ಧಿಗೆ ಹಲವು ಬಾರಿ ಅಧಿಕಾರಿಗಳ ಗಮನ ಸೆಳೆದಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ. ರಸ್ತೆ ದುರಸ್ತಿಗೆ ಅನುದಾನ ಮಂಜೂರಾಗುತ್ತದೆ ಎಂಬ ನಿರೀಕ್ಷೆ ಪ್ರತಿ ವರ್ಷ ಮೂಡಿದರೂ, ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎಂದು ಅವರು ಹೇಳುತ್ತಾರೆ. ಗ್ರಾಮದ ಜನರು ಮಳೆಗಾಲದಲ್ಲಿ ರಸ್ತೆ ಸಂಚಾರ ಸಂಪೂರ್ಣ ಹದಗೆಡುವ ಕಾರಣ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ತೊಂದರೆ ಅನುಭವಿಸುತ್ತಿದ್ದಾರೆ.
ಶಾಲೆಗೆ ಹೋಗುವ ಮಕ್ಕಳಿಗೂ ಇದೇ ರಸ್ತೆ ಏಕೈಕ ಮಾರ್ಗವಾಗಿರುವುದರಿಂದ ಪ್ರತಿದಿನವೂ ಕಷ್ಟದ ಪ್ರಯಾಣ ಎದುರಾಗುತ್ತಿದೆ. ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶೀಘ್ರವಾಗಿ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಗುಡ್ಡಳ್ಳಿಯಂತಹ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಗತ್ಯವಾಗಿದ್ದು, ಉತ್ತಮ ರಸ್ತೆ ನಿರ್ಮಾಣವಾದರೆ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಈಡೇರುವಂತಾಗಲಿದೆ.