ಅಡಿಕೆ ಬೆಳೆಯನ್ನು ಮಾದಕ ಉತ್ಪನ್ನ ಪಟ್ಟಿಗೆ ಸೇರಿಸಿರುವ ವಿಚಾರವಾಗಿ ಅಂಕೋಲಾದ ಅಗಸೂರಿನಲ್ಲಿ ಅಡಿಕೆ ಬೆಳೆಗಾರರ ಸಭೆ ನಡೆದಿದ್ದು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಅವರು ಈ ಬಗ್ಗೆ ಕಾನೂನು ಸಮರ ನಡೆಸಲು ಒತ್ತಾಯಿಸಿದರು. ಕಾನೂನು ಸಮರಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.
`ವಿಶ್ವ ಆರೋಗ್ಯ ಸಂಸ್ಥೆಯೂ ಅಡಿಕೆಯನ್ನು ತಂಬಾಕು, ನಿಕೋಟಿನ್ ಉತ್ಪನ್ನ ಪಟ್ಟಿಗೆ ಸೇರಿಸಿದೆ. ಶ್ರೀಲಂಕಾದಲ್ಲಿ ನಡೆದ ದಕ್ಷಿಣ ಏಷ್ಯಾ ದೇಶಗಳ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿಯೂ ಅಡಿಕೆ ಹಾನಿಕಾರಕ ಎಂದು ಬಿಂಬಿಸಲಾಗಿದೆ. ಅಡಿಕೆ ಉತ್ಪಾದನೆ, ಮಾರಾಟ, ಜಾಹಿರಾತು, ಪ್ರಚಾರ ಮತ್ತು ಪ್ರಾಯೋಜಕತ್ವದ ಸಂಪೂರ್ಣವಾಗಿ ನಿಷೇಧಿಸಿರುವುದು ಅಡಿಕೆ ಬೆಳೆಗಾರರ ಭವಿಷ್ಯಕ್ಕೆ ಮಾರಕವಾಗಿದೆ’ ಎಂದು ಈ ಸಭೆ ಅಭಿಪ್ರಾಯಪಟ್ಟಿತು.
`ಕೇಂದ್ರ ಸರಕಾರವು 16 ಸಂಶೋಧನಾ ಸಂಸ್ಥೆಗಳಿಗೆ ಅನುದಾನ ನೀಡಿ ಅಡಿಕೆಯು ಹಾನಿಕಾರಕವಲ್ಲ ಎಂದು ಸಾಭೀತುಪಡಿಸಲು ಮುಂದಾಗಿದೆ. ಈ ಸಂಸ್ಥೆಗಳಿAದ ಅಂತಿಮ ಸಂಶೋಧನಾ ವರದಿತರಿಸಿ ಸೂಕ್ತ ಕಾನೂನು ಹೋರಾಟ ನಡೆಸಬೇಕು’ ಎಂದು ರೈತರು ಒತ್ತಾಯಿಸಿದರು. `ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಲೇ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಬೆಳೆಗಾರರ ಪರವಾಗಿ ನ್ಯಾಯ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಈ ವೇಳೆ ಶಾಂತರಾಮ ನಾಯಕ ಅವರು ಹೇಳಿದರು. ಎಲ್ಲರೂ ಇದಕ್ಕೆ ಒಮ್ಮತ ಸೂಚಿಸಿದರು.
ಪ್ರಮುಖರಾದ ಗೌರೀಶ ನಾಯಕ, ರಾಮಚಂದ್ರ ನಾಯ್ಕ, ಶೋಭಾ ಗೌಡ, ಚಂದ್ರು ನಾಯ್ಕ ಕೊಡ್ಲಗದ್ದೆ, ಸಂತೋಷ ನಾಯ್ಕ, ನಾರಾಯಣ ನಾಯಕ, ರಮಾನಂದ ನಾಯಕ ಅಚವೆ, ಮಾದೇವ ನಾಯಕ ಮಾಬಗಿ, ಕೇಶವ ನಾಯಕ ಶಿರಗುಂಜಿ, ಅನಂತ ಗೌಡ ಅಗಸೂರು, ಚಂದ್ರು ಗೌಡ ಶಿರಗುಂಜಿ, ಶಿವರಾಮ ಪಟಗಾರ ಬ್ರಹ್ಮೂರ, ಮಾಣಿ ಭಟ್, ವೆಂಕಟರಮಣ ಹೆಗಡೆ ಸುಂಕಸಾಳ, ರಾಮದಾಸ ನಾಯಕ, ರಮೇಶ್ ನಾಯಕ, ಗೋವಿಂದ ಸುಬ್ರಾಯ ಮುಕ್ರಿ, ಸವಿತಾ ನಾಯಕ, ಬೆಳ್ಳಾ ರಮಣಿ ಕುಣಬಿ, ಮಾದೇವ ಕುಸ್ಲು ಗೌಡ ಇತರರು ಸಭೆಯಲ್ಲಿದ್ದರು.