ಎರಡುವರೆ ದಶಕದ ಹಿಂದಿನ ಅರಣ್ಯ ಅಪರಾಧ ಪ್ರಕರಣಗಳನ್ನು ಅರಣ್ಯ ಅಧಿಕಾರಿಗಳು ಇದೀಗ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ನೆಪದಲ್ಲಿ ಅರಣ್ಯ ಅತಿಕ್ರಮಣದಾರರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ನಡೆಯನ್ನು ವಿರೋಧಿಸಿ ಮುಂಡಗೋಡಿನ ಮಂದಿ ಸಿಡಿದೆದ್ದಿದ್ದಾರೆ.
1998ರಲ್ಲಿ ಜೀವನಾಧಾರಕ್ಕಾಗಿ ಅನೇಕರು ಅರಣ್ಯ ಅತಿಕ್ರಮಣ ನಡೆಸಿದ್ದು, ಅವರು ಆ ದಿನದಿಂದ ಅಲ್ಲಿಯೇ ವಾಸವಾಗಿದ್ದಾರೆ. ಆ ಅವಧಿಯಲ್ಲಿ ಅತಿಕ್ರಮಣದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದರೂ ಅದನ್ನು ಅವರು ಎದುರಿಸುತ್ತಿದ್ದಾರೆ. ಈ ನಡುವೆ ಅರಣ್ಯ ಹಕ್ಕು ಕಾಯಿದೆ ಅಡಿ ಅವರೆಲ್ಲರೂ ಅರ್ಜಿ ಸಲ್ಲಿಸಿದ್ದರೂ ಅರಣ್ಯ ಅಧಿಕಾರಿ-ಸಿಬ್ಬಂದಿ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅರಣ್ಯ ಅತಿಕ್ರಮಣದಾರರನ್ನು ನಿಯಮಬಾಹಿರವಾಗಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆದಿದನ್ನು ಮುಂಡಗೋಡಿನ ಜನ ವಿರೋಧಿಸಿದ್ದಾರೆ.
ಅರಣ್ಯ ಅಧಿಕಾರಿಗಳ ಕಾನೂನು ವಿರೋಧಿ ಕೃತ್ಯ ವಿರೋಧಿಸಿ ಬುಧವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು. ನ್ಯಾಯವಾದಿ ರವೀಂದ್ರ ನಾಯ್ಕ ಅವರು ಅರಣ್ಯ ಅಧಿಕಾರಿಗಳ ನಡೆಯನ್ನು ತೀವ್ರ ಖಂಡಿಸಿದರು. ಅರಣ್ಯ ಅಧಿಕಾರಿ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಅನೇಕ ಬಗೆಯ ಗೊಂದಲಗಳು ಹುಟ್ಟಿದವು. ಸಾವಿರಾರು ಸಂಖ್ಯೆಯ ಜನ ಒಮ್ಮೆಗೆ ಬಂದಿದ್ದನ್ನು ನೋಡಿ ಇಲಾಖೆಯವರು ತಬ್ಬಿಬ್ಬಾದರು. ಅದಾದ ನಂತರ ಅರಣ್ಯಾಧಿಕಾರಿ ರವಿ ಹುಳಕೊಟಿ ಅವರು ಅತಿಕ್ರಮಣದಾರರೊಂದಿಗೆ ಸಮಾಲೋಚನಾ ಸಭೆ ನಡೆಸಿದರು.
`27 ವರ್ಷಗಳ ಹಿಂದೆ ನಡೆದ ಅಪರಾಧ ಪ್ರಕರಣಕ್ಕೆ ಇದೀಗ ಹಿಂಸೆ ನೀಡುವುದು ಸರಿಯಲ್ಲ. ಒಂದು ದಿನ ಬೇಲಿ ಕೀಳುವುದು, ಮತ್ತೊಮ್ಮೆ ಸಾಗುವಳಿಗೆ ಆತಂಕ ಮಾಡುವುದು, ಇನ್ನೊಮ್ಮೆ ನೋಟಿಸ್ ನೀಡುವುದು ಸೇರಿ ಪದೇ ಪದೇ ಕಿರುಕುಳ ನೀಡುವ ಬದಲು ಒಂದೇ ಸಲ ಎಲ್ಲರನ್ನು ಸಾಯಿಸಿಬಿಡಿ’ ಎಂದು ಪ್ರತಿಭಟನಾಕಾರರು ಆಕ್ರೋಶದಿಂದ ಹೇಳಿದರು. ಈ ವೇಳೆ ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ ಹಾಗೂ ವೀರೇಶ ಪ್ರತಿಭಟನಾಕಾರರನ್ನು ಸಮಾಧಾನ ಮಾಡುವ ಪ್ರಯತ್ನ ನಡೆಸಿದರು. ಪಿಎಸ್‌ಐ ಯಲ್ಲಲಿಂಗ ಕನ್ನೂರ್ ಅವರು ಅವಘಡ ನಡೆಯದಂತೆ ಮುನ್ನಚ್ಚರಿಕೆವಹಿಸಿದರು.
ಸಂಘಟನೆ ಪ್ರಮುಖರಾದ ಶಿವಾನಂದ ಜೋಗಿ, ಗಣಪತಿ ನಾಯ್ಕ ಬೆಡಸಗಾಂವ್, ಮಂಜುನಾಥ ನಾಯ್ಕ, ಸ್ವಾಮಿ ಹಿರೇಮಠ, ನೀಲಕಂಠ ಜಿಲ್ನೂರು, ಮಲ್ಲಿಕಾರ್ಜುನ್ ಓಣಿಕೇರಿ, ಮುನೇಶ್ವರ ಹನುಮಾಪುರ, ಶಂಬು ಕಾತೂರು, ವೀರಭದ್ರ, ನಾಗಪ್ಪ ಬಾಚಣಿಕೆ, ಜಗದೀಶ್ ಕೊಡಂಬಿ, ಶೇಖಯ್ಯ ಹಿರೇಮಠ ಗುಂಜಾವತಿ, ನಾನಾಸಾಬ, ಪ್ರಶಾಂತ್ ಜೈನ್ ಬೆಡಸಗಾಂವ್, ಶಿವಾಜಿ, ದೇವೇಂದ್ರ, ಪರಮೇಶ್ವರ ಗೌಡ ಸಾನವಳ್ಳಿ, ಚಿದಬಂರ ನಾಯ್ಕ ಮೊದಲಾದವರು ಅರಣ್ಯ ಅಧಿಕಾರಿಗಳ ದಬ್ಬಾಳಿಕೆ ವಿರುದ್ಧ ಕಿಡಿಕಾರಿದರು.