ಕೆಡಿಸಿಸಿ ಚುನಾವಣೆಯ ಪ್ರಚಾರದ ಪ್ರಕ್ರಿಯೆಗಳು ತುರುಸಿನಿಂದ ಕೂಡಿದ್ದು, ಮತದಾರರಿಗೆ ಆಮೀಷ ಒಡ್ಡುವ ಪ್ರಕ್ರಿಯೆ ಜೋರಾಗಿದೆ. ಪ್ರತಿ ಮತ 50 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗೆ ಅವರವರ ಯೋಗ್ಯತೆಗೆ ಅನುಸಾರವಾಗಿ ಮತ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಈ ಹಣ ತಲುಪಿಸುವುದಕ್ಕಾಗಿ ಬಹುತೇಕ ತಾಲೂಕುಗಳಲ್ಲಿ ಮಧ್ಯವರ್ತಿಗಳು ಅಭ್ಯರ್ಥಿಗಳ ಬೆನ್ನು ಬಿದ್ದಿದ್ದಾರೆ. ಅಭ್ಯರ್ಥಿಯೂ ಮತದಾರರಿಗಾಗಿ ಬಿಡುಗಡೆ ಮಾಡಿದ ಹಣ ಮಧ್ಯವರ್ತಿಯ ಜೇಬು ಸೇರುತ್ತಿದೆ. ಈ ನಡುವೆ ಮತದಾರರ ಮನವೊಲೈಕೆಗೆ ಮಧ್ಯವರ್ತಿ ಮನೆಗೆ ಬಂದಾಗ ಅನೇಕರು `ನನ್ನ ಮತ ಮಾರಾಟಕ್ಕಿಲ್ಲ’ ಎಂದಿದ್ದು, ಮಾತುಕಥೆಗೆ ಬಂದವರನ್ನು ಬೈದು-ಉಗಿದು ಹೊರದಬ್ಬುತ್ತಿದ್ದಾರೆ.
ಅಕ್ಟೊಬರ್ 25ರ ಶನಿವಾರ ಕೆಡಿಸಿಸಿ ಬ್ಯಾಂಕಿನ ಮತದಾನ ಪ್ರಕ್ರಿಯೆ ನಡೆಯುತ್ತಿದೆ. 30 ಅಭ್ಯರ್ಥಿಗಳು ಕಣದಲ್ಲಿದ್ದು, ಅದರಲ್ಲಿ ಬಹುತೇಕರು ಈ ಚುನಾವಣೆಯನ್ನು ಪ್ರತಿಷ್ಠೆಯ ಕಣವನ್ನಾಗಿಸಿಕೊಂಡಿದ್ದಾರೆ. ಚುನಾವಣೆ ಗೆಲ್ಲುವುದಕ್ಕಾಗಿಯೇ ಕೋಟಿ ಕೋಟಿ ಲೆಕ್ಕಾಚಾರದಲ್ಲಿ ದುಡ್ಡು ಖರ್ಚು ಮಾಡುತ್ತಿದ್ದಾರೆ. `ಇಷ್ಟೊಂದು ಹಣ ಖರ್ಚು ಮಾಡಿ ಬ್ಯಾಂಕ್ ನಿರ್ದೇಶಕರಾದವರಿಗೆ ಏನು ಲಾಭ?’ ಎನ್ನುವ ಚರ್ಚೆಯೂ ಜೋರಾಗಿದೆ. ಜೊತೆಗೆ ಕೆಡಿಸಿಸಿ ಬ್ಯಾಂಕ್ ಮೂಲಕ ಈ ಮೊದಲು ನಡೆದಿದ್ದ ಹಗರಣಗಳು ಮುನ್ನಲೆಗೆ ಬಂದಿದೆ. ಹಿರಿಯ ಸಹಕಾರಿಗಳ ಜೊತೆ ಸಾರ್ವಜನಿಕರು ಸಹ ಖರೀದಿಯೇ ಆಗದ ಕಾರಿಗೆ ಸಾಲ ನೀಡಿದ ಹಗರಣದ ಬಗ್ಗೆ ಬೀದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ನಕಲಿ ಬಂಗಾರದ ಮೇಲಿನ ಸಾಲ, ಸಾಲ ಕೊಡುವಾಗ ಸಿಗುವ ಕಮಿಷನ್, ಸಾಲ ಮರುಪಾವತಿ ಆಗದಿರುವಾಗ ನಡೆಯುವ `ಒನ್ ಟೈಂ ಸೆಟ್ಲಮೆಂಟ್’ ವ್ಯವಹಾರದಲ್ಲಿನ ಸೆಟ್ಲಮೆಂಟ್, ಉದ್ಯೋಗ ನೇಮಕಾತಿಯಲ್ಲಿನ ಹಣಕಾಸು ವ್ಯವಹಾರ, ಉದ್ಯೋಗಿಗಳ ವರ್ಗಾವಣೆ ದಂಧೆ ಸೇರಿ ಹಲವು ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಮಾತು ಕೇಳಿ ಬರುತ್ತಿದೆ.
`ಕೆಡಿಸಿಸಿ ಸಭೆಯಲ್ಲಿ ಸಿಗುವ ಚಹಾ-ಮತ್ತು ಬಿಸ್ಕೇಟ್ ಆಸೆಗಾಗಿ ಯಾವ ಅಭ್ಯರ್ಥಿಗಳು ಈ ಪ್ರಮಾಣದಲ್ಲಿ ಹಣ ವೆಚ್ಚ ಮಾಡಲು ಸಾಧ್ಯವಿಲ್ಲ’ ಎಂದು ಅರಿತ ಮತದಾರರು ನೇರವಾಗಿಯೇ `ನನ್ನ ಮತ ಮಾರಾಟಕ್ಕಿಲ್ಲ’ ಎಂದಿದ್ದಾರೆ. `ಇಷ್ಟೊಂದು ಹಣ ಹೂಡಿಕೆ ಮಾಡಿ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕರಾದವರು ಹೂಡಿಕೆ ಮಾಡಿದ ಹಣ ಬಡ್ಡಿ ಜೊತೆ ಹಿಂಪಡೆಯುವುದು ಸಹಜ. ಈ ರೀತಿ ಉದ್ಯಮದ ಮನಸ್ಥಿತಿಯವರಿಗೆ ಮತ ಹಾಕಿದರೆ ಸಹಕಾರಿ ತತ್ವಗಳು ಹಳ್ಳಹಿಡಿಯುವುದು ಖಚಿತ’ ಎಂಬುದು ಹಿರಿಯ ಸಹಕಾರಿಗಳ ಆತಂಕ. ತಮ್ಮ ಸ್ವಾರ್ಥ ಹೊರತುಪಡಿಸಿ ಸಹಕಾರಿ ಸಂಘಗಳಿಗೆ ಸ್ಪಂದಿಸುವವರೇ? ಎಂಬ ಚರ್ಚೆ ನಡೆದಿದೆ. ಹೀಗಾಗಿಯೇ ಅವರು ಸಹ `ಮತ ಮಾರಾಟ ಮಾಡಬೇಡಿ’ ಎಂದು ಮನವಿ ಮಾಡುತ್ತಿದ್ದಾರೆ. `ಸಂಘಟನೆ ಹಾಗೂ ಸಂಸ್ಥೆ ಬೆಳವಣಿಗೆ ದೃಷ್ಠಿಯಂದ ಮತ ಮಾರಾಟ ಯೋಗ್ಯ ಬೆಳವಣಿಗೆಯಲ್ಲ’ ಎಂದು ಹಿರಿಯ ಸಹಕಾರಿಗಳು ಮತದಾರರಿಗೆ ಮನವರಿಕೆ ಮಾಡುತ್ತಿದ್ದಾರೆ.
ಇನ್ನೂ ಅಭ್ಯರ್ಥಿಗಳಿಂದ ಹಣಪಡೆದ ಮಧ್ಯವರ್ತಿಗಳು ಎಲ್ಲಾ ಮತದಾರರಿಗೂ ಸರಿಸಮಾನವಾಗಿ ಹಣ ಹಂಚುತ್ತಿಲ್ಲ ಎಂಬ ವಿಷಯ ಅಭ್ಯರ್ಥಿ ಹಾಗೂ ಮತದಾರರ ನಡುವೆ ಆಂತರಿಕ ಕಲಹಕ್ಕೆ ಕಾರಣವಾಗಿದೆ. ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಮಧ್ಯವರ್ತಿಗಳು ಅಭ್ಯರ್ಥಿ ಹಾಗೂ ಮತದಾರರ ಭೇಟಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಅವರಿಬ್ಬರು ಒಟ್ಟಿಗೆ ಕೂತು ಮಾತನಾಡಲು ಬಿಡುತ್ತಿಲ್ಲ. ಅದಾಗಿಯೂ ಕೆಲ ಅಭ್ಯರ್ಥಿಗಳು ಪ್ರಚಾರದ ವೇಲೆ ಮತದಾರರಿಗೆ ಸೀರೆ-ಪಂಜೆ, ಮೂರ್ತಿಯ ಉಡುಗರೆ ಕೊಡುತ್ತಿದ್ದಾರೆ. ವಿದೇಶಿ ಪ್ರವಾಸ, ಸಾಲ ಕೊಡಿಸುವ ಭರವಸೆ ಜೊತೆ ಲೇಔಟಿನಲ್ಲಿ ಸೈಟ್ ಒದಗಿಸುವ ಆಮೀಷಗಳು ಮತದಾರರಿಗೆ ಸಿಕ್ಕಿದೆ.
ಕೆಲ ಕಡೆ ತಮ್ಮ ಪ್ರಭಾವ-ಆತ್ಮೀಯ ಮಾತುಗಳಿಂದ ಮತಪಡೆಯುವ ಕಸರತ್ತು ನಡೆಸಿದ್ದು ಮಧ್ಯವರ್ತಿಗಳು ಅಲ್ಲಿಯೂ ಅಭ್ಯರ್ಥಿಗಳಿಂದಪಡೆದ ಹಣವನ್ನು ತಮ್ಮ ಜೇಬಿಗಿಳಿಸಿದ್ದಾರೆ. ಈ ಎಲ್ಲದರ ನಡುವೆ ಕಣದಲ್ಲಿರುವ ಬೆರಳಣಿಕೆ ಅಭ್ಯರ್ಥಿಗಳು ಮಾತ್ರ ಕಾಸು ಬಿಚ್ಚದೇ ಚುನಾವಣೆ ಎದುರಿಸುವ ತಯಾರಿಯಲ್ಲಿದ್ದಾರೆ. ಕೆಲವೇ ಕೆಲವು ಅಭ್ಯರ್ಥಿಗಳು `ಸಹಕಾರಿ ತತ್ವವೇ ನನ್ನ ನಿಲುವು’ ಎಂದು ಸಾರಿದ್ದು ಮತ ಬಿಕ್ಷೆ ಬೇಡುತ್ತಿದ್ದಾರೆ. `ನ್ಯಾಯಕ್ಕೆ ಮಾತ್ರ ನಮ್ಮ ಮತ’ ಎಂದು ಸಾರಿರುವ ಮತದಾರರು ಸಹ ಭ್ರಷ್ಟಾಚಾರ ನಡೆಸಿದೇ, ಪ್ರಾಮಾಣಿಕವಾಗಿರುವ ಅಭ್ಯರ್ಥಿಗನ್ನು ಬೆಂಬಲಿಸುವ ಮಾತನಾಡಿದ್ದಾರೆ. ಈ ಎಲ್ಲಾ ಘಟನಾವಳಿಗಳಿಂದ ಈ ಬಾರಿ ಕೆಡಿಸಿಸಿ ಚುನಾವಣೆ ರಂಗೇರಿದ್ದು, ಸಹಕಾರಿ ರಂಗ ಭ್ರಷ್ಟಗೊಳ್ಳುವ ಈ ಸನ್ನಿವೇಶದಲ್ಲಿ ಮತದಾರರ ತೀರ್ಮಾನ ಕಾಯ್ದು ನೋಡುವುದೊಂದೇ ದಾರಿಯಾಗಿದೆ.