ಯಲ್ಲಾಪುರದ ಬಾಳಗಿಮನೆಯ ವ್ಯಾಪಾರಿ ರಾಘವೇಂದ್ರ ದೇವಾಡಿಗ ಅವರು 1ರೂಪಾಯಿ ಹೂಡಿಕೆ ಮಾಡಿದವರಿಗೆ 80ರೂ ಹಣ ಕೊಡುವ ಆಮೀಷ ಒಡ್ಡಿದ್ದು, ಆ ಆಟಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಆಮೀಷ ಒಡ್ಡಿ ಜನರಿಂದ ಸಂಗ್ರಹಿಸಿದ್ದ ಹಣವನ್ನು ಪಿಸೈ ಸಿದ್ದಪ್ಪ ಗುಡಿ ಅವರು ವಶಕ್ಕೆಪಡೆದಿದ್ದಾರೆ.
ಯಲ್ಲಾಪುರ ಪಟ್ಟಣದ ಗೋಲ್ಡನ್ ಬೇಕರಿ ಬಳಿ ರಾಘವೇಂದ್ರ ದೇವಾಡಿಗ ಅವರು ಜೂಜಾಟ ನಡೆಸುವಾಗ ಸಿಕ್ಕಿ ಬಿದ್ದಿದ್ದಾರೆ. ಏಪ್ರಿಲ್ 25ರಂದು ಅವರು ಹಣದ ಮೇಲೆ ಹೂಡಿಕೆ ಮಾಡಿ ಲಾಭಗಳಿಸುವ ಆಮೀಷ ಒಡ್ಡುತ್ತಿರುವುದನ್ನು ನೋಡಿ ಪೊಲೀಸರು ದಾಳಿ ಮಾಡಿದ್ದಾರೆ. 1ರೂಪಾಯಿಗೆ 80ರೂ ಕೊಡುವುದಾಗಿ ಹೇಳುತ್ತಿದ್ದ ರಾಘವೇಂದ್ರ ದೇವಾಡಿಗ ಅವರು ಜನರಿಂದ ಹಣಪಡೆಯುವಾಗಲೇ ಈ ದಾಳಿ ನಡೆದಿದೆ.
ಒಂದೆರಡು ತಾಸು ಆಮೀಷ ಒಡ್ಡುವ ಕೆಲಸ ಮಾಡಿದ ರಾಘವೇಂದ್ರ ದೇವಾಡಿಗ ಅವರು ಒಟ್ಟು 560ರೂ ಹಣ ಸಂಪಾದಿಸಿದ್ದು, ಆ ಹಣವನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಜೊತೆಗೆ `ಓಸಿ-ಮಟ್ಕಾ ಆಡಿಸುವುದು ಕಾನೂನುಬಾಹಿರ’ ಎಂದು ರಾಘವೇಂದ್ರ ದೇವಾಡಿಗ ಅವರಿಗೆ ಬುದ್ದಿ ಹೇಳಿದ್ದಾರೆ. ಮಟ್ಕಾ ಆಡಿಸಲು ಬಳಸಿದ್ದ ಪೆನ್ನು-ಪೆಪರನ್ನು ಪೊಲೀಸರು ವಶಕ್ಕೆಪಡೆದಿದ್ದು, ಕೇಸು ದಾಖಲಿಸಿದ್ದಾರೆ.