ಹೊನ್ನಾವರದ ಪುಣ್ಯ ಹಾಗೂ ಪ್ರವಾಸಿ ತಾಣವಾಗಿರುವ ರಾಮತೀರ್ಥ ಗೆಬ್ಬೆದ್ದಿದೆ. ಕನಿಷ್ಟ ಮೂಲಭೂತ ಸೌಕರ್ಯವೂ ಇಲ್ಲದೇ ಈ ತಾಣ ಹಾಳು ಬಿದ್ದಿದೆ. ಪುರಾಣ ಪ್ರಸಿದ್ಧ ರಾಮತೀರ್ಥ ಸದ್ಯ `ತೀರ್ಥ ಸೇವಕ’ರ ಪ್ರದೇಶವಾಗಿ ಬದಲಾಗಿದೆ.
ರಾಮತೀರ್ಥ ಕ್ಷೇತ್ರದಲ್ಲಿ ಪ್ರವಾಸಿಗರಿಗಾಗಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಆ ಶೌಚಾಲಯಕ್ಕೆ ನೀರು ಸರಬರಾಜು ವ್ಯವಸ್ಥೆ ಇಲ್ಲ. ಅಲ್ಲಿರುವ ಬೇಸಿನ್ ಒಡೆದಿದೆ. ಸ್ನಾನಗೃಹಕ್ಕೆ ಕಿಟಕಿ-ಬಾಗಿಲುಗಳಿಲ್ಲ. ಕಟ್ಟಡವೂ ಸಂಪೂರ್ಣ ಶಿಥಿಲಾವ್ಯವಸ್ಥೆ ತಲುಪಿದೆ. ಕಟ್ಟಡದ ಸುತ್ತ ಕಾಡು ಬೆಳೆದಿದ್ದು, ಅಲ್ಲಿಂದ ಹಾವು-ಚೇಳುಗಳು ಒಳಗೆ ನುಗ್ಗುತ್ತಿದೆ. ಅಲ್ಲೆಲ್ಲವೂ ಪ್ಲಾಸ್ಟಿಕ್ ಬಾಟಲಿಗಳು ಬಿದ್ದಿದೆ. ಎಲ್ಲಾ ಕಡೆ ತ್ಯಾಜ್ಯ ಕಾಣುತ್ತಿದೆ. ಮಾದಕ ವ್ಯಸನಿಗಳು ಈ ಭಾಗ ಪ್ರವೇಶಿಸಿ ಗಲೀಜು ಮಾಡುತ್ತಿದ್ದಾರೆ.
ಇಲ್ಲಿನ ಕಟ್ಟಡದ ಮೇಲೆ ಕಿಡಿಗೇಡಿಗಳು ಅಸಹ್ಯ ಬರಹಗಳನ್ನು ಬರೆದಿದ್ದಾರೆ. ಅಲ್ಲಿನ ಪರಿಸರವೂ ಹಾಳಾಗಿದ್ದು, ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಯಿದೆ. ರಾಮನ ಕುರುಹುಗಳಿಂದ ಪ್ರಸಿದ್ಧವಾಗಿರುವ ರಾಮತೀರ್ಥದ ಅಭಿವೃದ್ಧಿಗೆ ಯಾರೂ ಮನಸ್ಸು ಮಾಡಿಲ್ಲ. ತಮಗೆ ಇದು ಸಂಬoಧವೇ ಇಲ್ಲ ಎಂಬAತೆ ಸ್ಥಳೀಯ ಆಡಳಿತ ವರ್ತಿಸುತ್ತಿದೆ.
ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡ್ರಿಗಸ್ ಅವರು ಈ ದಿನ ರಾಮತೀರ್ಥಕ್ಕೆ ಭೇಟಿ ನೀಡಿದ್ದು, ಅಲ್ಲಿನ ಅವ್ಯವಸ್ಥೆಗಳನ್ನು ಮಾಧ್ಯಮದ ಮೂಲಕ ಗಮನಕ್ಕೆ ತಂದಿದ್ದಾರೆ. ಅವ್ಯವಸ್ಥೆ ನೋಡಿದ ಪ್ರವಾಸಿಗರು ದೂರದಿಂದಲೇ ಹಿಂತಿರುಗುತ್ತಿದ್ದು, ಪ್ರವಾಸೋದ್ಯಮ ಬೆಳವಣಿಗೆ ಇದು ಮಾರಕವಾಗಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವರಿಗೆ ಸಹ ಪತ್ರ ಬರೆಯುವುದಾಗಿ ಅವರು ಹೇಳಿದ್ದಾರೆ. ಅಲ್ಲಿನ ಅವ್ಯವಸ್ಥೆಯ ಬಗ್ಗೆ ಸ್ಥಳೀಯರಾದ ಪ್ರಭಾಕರ ಅವರು ಅಸಮಧಾನವ್ಯಕ್ತಪಡಿಸಿದರು.