ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ ಮೊದಲ ವಾರ ಶುರುವಾದ ಮಳೆ ಇನ್ನೂ ನಿಂತಿಲ್ಲ. ಹೀಗಿರುವಾಗ ಈ ಮಳೆಗಾಲದ ರೆಡ್ ಅಲರ್ಟ ಅವಧಿಯಲ್ಲಿ ಯಲ್ಲಾಪುರದಲ್ಲಿ ಕೆರೆ ನಿರ್ಮಾಣ, ಕಾಲುವೆ ಸುಧಾರಣೆ, ಕೃಷಿ ಹೊಂಡ ಅಭಿವೃದ್ಧಿ ನಡೆದ ಬಗ್ಗೆ ಅಧಿಕೃತ ದಾಖಲೆ ಸೃಷ್ಠಿ ನಡೆದಿದೆ. ಈ ಎಲ್ಲಾ ಕೆಲಸಗಳಿಗಾಗಿ ಲಕ್ಷಾಂತರ ರೂ ಹಣ ವೆಚ್ಚ ಮಾಡಲಾಗಿದ್ದು, ಧಾರಾಕಾರ ಮಳೆಯಲ್ಲಿಯೂ ಕೆರೆ ಹೂಳೆತ್ತುವ ಕಾಮಗಾರಿ ನಡೆದ ದಾಖಲೆ ನೋಡಿದವರಿಗೆ ತಲೆಬಿಸಿ ಶುರುವಾಗಿದೆ!
ಸಾಮಾನ್ಯವಾಗಿ ಮಳೆಗಾಲದ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಗಳು ನಡೆಯುವುದಿಲ್ಲ. ಆ ಅವಧಿಯಲ್ಲಿ ನರೆಗಾ ಕೆಲಸ ಮಾಡದಂತೆ ಸರ್ಕಾರವೇ ಸುತ್ತೋಲೆ ಹೊರಡಿಸಿದ ಉದಾಹರಣೆಗಳಿವೆ. ಆ ಅವಧಿಯಲ್ಲಿ ಕೂಲಿ ಕಾರ್ಮಿಕರು ಸಹ ಬೇಡಿಕೆ ಸಲ್ಲಿಸುವುದಿಲ್ಲ. ಆದರೆ, ದಾಖಲೆಗಳ ಪ್ರಕಾರ ಯಲ್ಲಾಪುರದ ಕಣ್ಣಿಗೇರಿ, ಹಾಸಣಗಿ, ಕುಂದರಗಿ, ಮಂಚಿಕೇರಿ (ಕಂಪ್ಲಿ) ಭಾಗದಲ್ಲಿ ಮಳೆಗಾಲದ ಅವಧಿಯಲ್ಲಿಯೇ ಅತಿ ಹೆಚ್ಚು ಕೆಲಸ ನಡೆದಿದೆ. ಕೆರೆ ನಿರ್ಮಾಣ, ಕಾಲುವೆ ನಿರ್ಮಾಣ, ಕೃಷಿ ಹೊಂಡ ನಿರ್ಮಾಣವನ್ನು ವೈಯಕ್ತಿಕ ಕಾಮಗಾರಿ ಪಟ್ಟಿಗೆ ಸೇರಿಸಿ ಲಕ್ಷಾಂತರ ರೂ ಬಿಲ್ ಮಾಡಲಾಗಿದೆ.
ಮಳೆಗಾಲದ ಅವಧಿಯಲ್ಲಿ ಯಲ್ಲಾಪುರದ ಕಣ್ಣಿಗೇರಿ ಗ್ರಾಮ ಪಂಚಾಯತದಲ್ಲಿನ ಹುಲಿಪಾಲ ನಾರಾಯಣ ಭಟ್ಟ ತೋಟದ ಕೆರೆ ನಿರ್ಮಾಣ 317460ರೂ ಖರ್ಚು ಮಾಡಲಾಗಿದೆ. ಲಾಲಗುಳಿ ಗಣಪತಿ ಹೆಗಡೆ ತೋಟ ಹತ್ತಿರ ಕೆರೆ ಹೂಳೆತ್ತಲು 133200 ರೂ ಖರ್ಚಾಗಿದೆ. ಗೋಪಿಗಾಳಿಯಲ್ಲಿ ಕೃಷಿ ಹೊಂಡಕ್ಕೆ 59570 ರೂ, ವೀಣಾ ಭಂಡಾರಿ ಹೊಲದ ಹತ್ತಿರ ಕಾಲುವೆ ನಿರ್ಮಾಣಕ್ಕೆ 51800ರೂ ಖರ್ಚಾದ ಬಗ್ಗೆ ದಾಖಲೆ ಹೇಳುತ್ತದೆ. ಹಾಸಣಗಿ ಗ್ರಾ ಪಂ ಬೊಮ್ಮನಳ್ಳಿ ನಾಗೇಂದ್ರ ಮರಾಠಿ ಜಮೀನ ಪಕ್ಕ ಕಾಲುವೆ ನಿರ್ಮಾಣಕ್ಕೆ 1.32 ಲಕ್ಷ ರೂ, ಹೊಟಗೇರಿ ಚಂದ್ರ ಶೇರುಗಾರ ಜಮೀನ ಪಕ್ಕ ಕಾಲುವೆಗೆ 99 ಸಾವಿರ ರೂ, ಕುಂದರಗಿ ಗ್ರಾಪಂ ನ ಭರತನಳ್ಳಿ ಕಾಲುವೆಗೆ 1.42 ಲಕ್ಷ ರೂ, ಕುಂದರಗಿ ಸನಂ 88ರಲ್ಲಿ ಕಾಲುವೆಗೆ 1.48 ಲಕ್ಷ ರೂ ಖರ್ಚಾಗಿದೆ. ಮಂಚಿಕೇರಿ (ಕಂಪ್ಲಿ) ಗ್ರಾಮ ಪಂಚಾಯತದ ಸೋಮನಳ್ಳಿ ವನಿತಾ ಕುಣಬಿ ಜಮೀನ ಹತ್ತಿರ ಕೆರೆ ಹೂಳೆತ್ತಲು 1.31 ಲಕ್ಷ ರೂ, ಬಾಮಣಕೊಪ್ಪ ವಿಶ್ವನಾಥ ಹೆಗಡೆ ತೋಟದ ಮೇಲೆ ಕೆರೆ ನಿರ್ಮಾಣಕ್ಕೆ 77330ರೂ, ಬಾಮಣಕೊಪ್ಪ ಮಜಿರೆಯಲ್ಲಿ ಕೆರೆ ಹೂಳೆತ್ತಲು 85100 ರೂ, ಕಂಪ್ಲಿ ಸೂರಮನೆಯಲ್ಲಿ ಕೆರೆ ನಿರ್ಮಾಣ ಸೇರಿ ಎಲ್ಲಾ ಕಾಮಗಾರಿಗಳನ್ನು ಜೂನ್ ಎರಡನೇ ವಾರದಿಂದ ಅಗಸ್ಟ್ ಅವಧಿಯಲ್ಲಿ ಮಾಡಿದ ಬಗ್ಗೆ ದಾಖಲೆಗಳಿವೆ. ಇದಲ್ಲದೇ ಇನ್ನಿತರ ಅನೇಕ ಕಡೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಜನ ಕೆಲಸ ಮಾಡಿದ ಬಗ್ಗೆ ದಾಖಲೆಗಳಿವೆ!
ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಕೆರೆ ಹೂಳು ತೆಗೆಯಲು ಸಾಧ್ಯವಿಲ್ಲ ಎಂಬುದು ಎಲ್ಲಿರಗೂ ಗೊತ್ತಿರುವ ವಿಷಯ. ಕೃಷಿ ಹೊಂಡಗಳ ನಿರ್ಮಾಣ ಸಹ ಈ ಅವಧಿಯಲ್ಲಿ ಅಸಾಧ್ಯ. ಇನ್ನೂ ರಭಸವಾಗಿ ನೀರು ಹರಿಯುವಾಗ ಕಾಲುವೆ ಹೇಗೆ ನಿರ್ಮಿಸಿದರು? ಎಂಬುದು ಯಾರಿಗೂ ಗೊತ್ತಿಲ್ಲ. ಅದಾಗಿಯೂ ಈ ಎಲ್ಲಾ ಕೆಲಸಗಳಿಗೆ ಹಣ ಪಾವತಿ ಆಗಿದೆ. ಹವಾಮಾನ ಇಲಾಖೆ ಅಂಕಿ ಸಂಖ್ಯೆಗಳ ಪ್ರಕಾರ ಜೂನ್ ತಿಂಗಳಿoದ ಸಪ್ಟೆಂಬರ ಅವಧಿಯಲ್ಲಿ ಯಲ್ಲಾಪುರದಲ್ಲಿ ಸುಮಾರು 1723 ಮಿಮೀ ಮಳೆಯಾಗಿದೆ. ಈ ಅವಧಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದ ಅಧಿಕಾರಿಗಳಿಗೆ ಸರ್ಕಾರದಿಂದ ಪ್ರಶಸ್ತಿಬರುವ ಸಾಧ್ಯತೆಗಳು ಹೆಚ್ಚಿವೆ!