ಬರುವ ಬೇಸಿಗೆಯಲ್ಲಿ ಜನರಿಗೆ ನೀರು ಕುಡಿಸುವುದಕ್ಕಾಗಿ ಉತ್ತರ ಕನ್ನಡ ಜಿಲ್ಲಾ ಪಂಚಾಯತವೂ 2 ಕೋಟಿ ರೂ ಹಣ ಮಂಜೂರಿ ಮಾಡಿದೆ. ಈ ಹಣ ಬಳಸಿಕೊಂಡು 118 ಕಾಮಗಾರಿಗಳ ಮೂಲಕ ಜನರ ದಾಹ ತಣಿಸಲು ಯೋಜನೆ ರೂಪಿಸಲಾಗಿದೆ.
ಈ ಎಲ್ಲಾ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಮತ್ತೊಮ್ಮೆ ಪರಿಶೀಲಿಸಿ, ಯೋಜನೆಯ ಅಗತ್ಯ ದಾಖಲೆ ಹಾಗೂ ನಿಯಮಾವಳಿಗಳ ಬಗ್ಗೆ ಗಮನಿಸಿ ಕಡತ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ ಅವರು ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರುಗಳು ಅದೇ ಕೆಲಸದಲ್ಲಿ ತೊಡಗಿದ್ದಾರೆ. ಸದ್ಯ ಕುಡಿಯುವ ನೀರು ಯೋಜನೆಯ ಕ್ರಿಯಾ ಯೋಜನೆಗಳ ದಾಖಲೆ ಪರಿಶೀಲನೆ ನಡೆಯುತ್ತಿದ್ದು, ಮುಂದಿನ ಶನಿವಾರದ ಒಳಗೆ ಆ ಕಡತ ದಿಲೀಷ್ ಶಶಿ ಅವರ ಟೇಟಲ್ ಮೇಲೆ ಬರುವ ಸಾಧ್ಯತೆಗಳಿವೆ.
ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗಳನ್ನು 4 ಹಂತದಲ್ಲಿ ಕೈಗೊಳ್ಳಲಾಗಿದೆ. 965 ಕಾಮಗಾರಿಗಳ ಪೈಕಿ 956 ಕಾಮಗಾರಿಯ ಕೆಲಸ ಮುಗಿದಿದ್ದು, ಗ್ರಾಮ ಪಂಚಯತಗಳಿಗೆ ಹಸ್ತಾಂತರ ನಡೆದಿದೆ. ಜಲ ಜೀವನ್ ಮಿಷನ್ ಕಾಮಗಾರಿಗಳಲ್ಲಿ ಜಲಮೂಲದ ಸ್ಥಳ ಬದಲಾವಣೆ, ಹೆಚ್ಚಿನ ಮನೆಗಳಿಗೆ ಸಂಪರ್ಕ ನೀಡಬೇಕಾದ ಸಂದರ್ಭದಲ್ಲಿ ಕಾಮಗಾರಿಗಳ ಪರಿಮಾಣಗಳಲ್ಲಿ ಉಂಟಾಗುವ ವ್ಯತ್ಯಾಸಗಳ ಕುರಿತ ವರದಿಯೂ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.