ಕೆರೆಯಲ್ಲಿದ್ದ ಮೀನು ಹಿಡಿಯಲು ಹೋಗಿದ್ದ ಭಟ್ಕಳದ ಶಶಿಧರ್ ಮೊಗೇರ್ ಅದೇ ಕೆರೆಯಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ.
ಭಟ್ಕಳ ವೆಂಕಟಾಪುರ ಹೆಬ್ಬಳೆಯ ಶಶಿಧರ್ ಯೋಗೇಶ್ ಮೊಗೇರ್ (15) ಅವರು ಭಟ್ಕಳದ ನ್ಯೂ ಇಂಗ್ಲೀಷ್ ಸ್ಕೂಲ್‌ನ ವಿದ್ಯಾರ್ಥಿಯಾಗಿದ್ದರು. ಶನಿವಾರ ಅವರು ಆರಸಿಕೆರೆಯ ಪ್ರಜ್ವಲ ನಾರಾಯಣ ನಾಯ್ಕ, ಕಡಸಲಗದ್ದೆಯ ತೇಜು ದೇವೇಂದ್ರ ದೇವಾಡಿಗ, ಮುಂಡಳ್ಳಿಯ ಪ್ರೀತಮ ಭಾಸ್ಕರ ಮೊಗೇರ್, ಡಿಪಿ ಕಾಲೋನಿಯ ಕರ್ಣ ಸತೀಶ ಮಡಿವಾಳ ಹಾಗೂ ಮೊಗೇರ ಕೇರಿಯ ಶ್ರೀಮಾನ್ ದತ್ತಾ ಮೊಗೇರ ಅವರ ಜೊತೆ ಕೆರೆ ಕಡೆ ಹೋಗಿದ್ದರು.
ಮಧ್ಯಾಹ್ನ ಊಟ ಮುಗಿಸಿ ಅವರೆಲ್ಲರೂ ಮೀನು ಹಿಡಿಯುತ್ತಿದ್ದು, ಆಗ ಶಶಿಧರ ಮೊಗೇರ್ ಅವರು ಕಾಲು ಜಾರಿ ನೀರಿಗೆ ಬಿದ್ದರು. ಶಶಿಧರ ಮೊಗೇರ್ ಅವರಿಗೆ ಸರಿಯಾಗಿ ಈಜು ಬರುತ್ತಿರಲಿಲ್ಲ. ನೀರಿನ ಆಳಕ್ಕೆ ಹೋದ ಅವರಿಗೆ ಕೈ-ಕಾಲು ಬೀಸಿದರೂ ಮೇಲೆ ಬರಲು ಸಾಧ್ಯವಾಗಲಿಲ್ಲ. ನೀರಿನಲ್ಲಿ ಮುಳುಗುತ್ತಿದ್ದ ಅವರನ್ನು ಸ್ನೇಹಿತರು ಮೇಲೆತ್ತಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಸ್ಥಳೀಯರು ಬಂದು ಶಶಿಧರ ಮೊಗೇರ್ ಅವರನ್ನು ಬದುಕಿಸುವ ಪ್ರಯತ್ನ ಮಾಡಿದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ನೀರಿನ ಆಳದಲ್ಲಿಯೇ ಶಶಿಧರ ಮೊಗೇರ್ ಅವರು ತಮ್ಮ ಜೀವ ಬಿಟ್ಟರು.
ಭಟ್ಕಳ ಡಿವೈಎಸ್ಪಿ ಮಹೇಶ್ ಕೆ ಅವರು ಸದ್ಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಭಟ್ಕಳ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.