ಜೆಸಿಬಿ ಖರೀದಿಗೆ ಸಾಲ ಮಾಡಿದ್ದ ಭಟ್ಕಳದ ಸಿದ್ದಪ್ಪ ಸೇಗುವಾಸಿ ಅವರು ಸಾಲದ ಕಂತು ಸರಿಯಾಗಿ ಪಾವತಿಸದ ಕಾರಣ ಪೆಟ್ಟು ತಿಂದಿದ್ದಾರೆ. ಜೆಸಿಬಿ ಜಪ್ತು ಮಾಡಲು ಬಂದಿದ್ದ ಫೈನಾನ್ಸ ಕಂಪನಿಯವರ ಜೊತೆ ಕಾಯ್ದೆ-ಕಾನೂನು ಮಾತನಾಡಿದ ಕಾರಣ ನಾಲ್ವರು ಸೇರಿ ಅವರಿಗೆ ಥಳಿಸಿದ್ದಾರೆ.
ಭಟ್ಕಳದ ಸಾಗರ ರಸ್ತೆ ಬಳಿಯಿರುವ ಡಿಪಿ ಕಾಲೋನಿಯಲ್ಲಿ ಸಿದ್ದಪ್ಪ ಸೇಗುವಾಸಿ ಅವರು ವಾಸವಾಗಿದ್ದರು. ಅವರು ಚೋಳ ಇನ್ವೆಸ್ಟಮೆಂಟ್ ಫೈನಾನ್ಸಿನ ಮೂಲಕ ಸಾಲ ಮಾಡಿ ಜೆಸಿಬಿ ಯಂತ್ರ ಖರೀದಿಸಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಸಾಲ ಮರು ಪಾವತಿ ಸಾಧ್ಯವಾಗಿರಲಿಲ್ಲ. ಹೀಗಾಗಿ ಫೈನಾನ್ಸ ಕಂಪನಿಯ ಮ್ಯಾನೇಜರ್ ಜಮಖಂಡಿಯ ಪ್ರಭಾಕರ ವಠಾರ್ ಹಾಗೂ ಬಾಗಲಕೋಟೆಯ ರಮೇಶ ವಾಲಿಕರ್ ಅವರು ಭಟ್ಕಳಕ್ಕೆ ಬಂದಿದ್ದರು.
ಮಾರ್ಚ 29ರಂದು ತೆಂಗಿನಗುAಡಿ ಕ್ರಾಸಿನ ಬಳಿ ನಿಲ್ಲಿಸಿದ್ದ ಜೆಸಿಬಿ ನೋಡಿದ ಪ್ರಭಾಕರ ವಠಾರ್ ಹಾಗೂ ರಮೇಶ್ ವಾಲಿಕರ್ ಇನ್ನಿಬ್ಬರ ಜೊತೆ ಸೇರಿ ಜೆಸಿಬಿ ಚಾಲು ಮಾಡಿದ್ದರು. ಜೆಸಿಬಿ ಯಂತ್ರವನ್ನು ಜಪ್ತು ಮಾಡಿ ಕೊಂಡೊಯ್ಯುತ್ತಿದ್ದರು. ಆಗ, ಸಿದ್ದಪ್ಪ ಸೇಗುವಾಸಿ ಅವರು ಅದಕ್ಕೆ ತಕರಾರು ಮಾಡಿದರು. `ನೋಟಿಸ್ ನೀಡದೇ ಜಪ್ತು ಮಾಡುವ ಹಾಗಿಲ್ಲ’ ಎಂದು ಕಾಯ್ದೆ ಮಾತನಾಡಿದರು. ಕೆಟ್ಟದಾಗಿ ನಿಂದಿಸಿದ ಆ ನಾಲ್ವರು ಸಿದ್ದಪ್ಪ ಸೇಗುವಾಸಿ ಅವರಿಗೆ ಎರಡು ಏಟು ಬಿಟ್ಟರು.
ಸದ್ಯ ಜೆಸಿಬಿ ಕಳ್ಳತನವಾಗಿದೆ ಎಂದು ಸಿದ್ದಪ್ಪ ಸೇಗುವಾಸಿ ಪೊಲೀಸ್ ದೂರು ನೀಡಿದ್ದಾರೆ. ತಮ್ಮ ಮೇಲೆ ದಾಳಿ ಮಾಡಿದ ನಾಲ್ವರ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದಾರೆ. ಭಟ್ಕಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.