ಜನ ವಿರೋಧದ ನಡುವೆಯೂ ಅಂಕೋಲಾದ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದ ಸಿದ್ಧತೆ ನಡೆದಿದ್ದು, ಇದನ್ನು ವಿರೋಧಿಸಿ ಸಾವಿರಾರು ಜನ ಧರಣಿ ಶುರು ಮಾಡಿದ್ದಾರೆ. `ಯೋಜನೆ ರದ್ಧಾಗುವವರೆಗೂ ಧರಣಿ ಹಿಂಪಡೆಯುವುದಿಲ್ಲ’ ಎಂದು ಪ್ರತಿಭಟನಾಕಾರರು ಘೋಷಿಸಿದ್ದಾರೆ.
ಬುಧವಾರ ನಡೆದ ಧರಣಿಯಲ್ಲಿ `ಉತ್ತರ ಕನ್ನಡ ಉಳಿಸಿ’ ಎಂಬ ಘೋಷಣೆಗಳು ಮೊಳಗಿದವು. ಅಂಕೋಲಾ ತಹಶೀಲ್ದಾರ್ ಕಚೇರಿಯ ಎದುರು ಜನ ಜಮಾಯಿಸಿ ತಮ್ಮ ಆಕ್ರೋಶವ್ಯಕ್ತಪಡಿಸಿದರು. ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು. `ಕೇಣಿ ವಾಣಿಜ್ಯ ಬಂದರು ಯೋಜನೆ ಸಂಪೂರ್ಣವಾಗಿ ಕೈಬಿಡಬೇಕು’ ಎಂದು ಜನ ತಮ್ಮ ಅಹವಾಲು ಸಲ್ಲಿಸಿದರು.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಅನೇಕ ಯೋಜನೆಗಳು ಬಂದಿವೆ. ಅದರಿಂದ ಯಾವ ಅಭಿವೃದ್ಧಿಯೂ ನಡೆದಿಲ್ಲ. ಜನ ಪದೇ ಪದೇ ನಿರಾಶ್ರಿತರಾಗಿದ್ದು, ಬದುಕಿಗೆ ಮಾರಕವಾಗ ಕೇಣಿ ಬಂದರು ಯೋಜನೆಯೂ ನಮಗೆ ಬೇಡ’ ಎಂದು ಪ್ರತಿಭಟನಾಕಾರರು ವಿವರಿಸಿದರು. `ಕೇಣಿ ಬಂದರು ಯೋಜನೆಯಿಂದ ಪರಿಸರ ನಾಶವಾಗಲಿದೆ’ ಎಂದು ಒತ್ತಿ ಹೇಳಿದರು. `ಬಡ ಮೀನುಗಾರರ ಬದುಕು ನಾಶ ಮಾಡುವ ಅಭಿವೃದ್ಧಿ ಯಾರಿಗೂ ಬೇಡ. ಸಾರ್ವಜನಿಕ ಆಲಿಕೆ ಸಭೆಯಲ್ಲಿಯೂ ಬಂದರು ವಿರುದ್ಧ ಅಹವಾಲು ಸಲ್ಲಿಕೆಯಾಗಿದೆ. ಆದರೂ, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಆಕ್ಷೇಪಿಸಿದರು.
`ತಮ್ಮ ಈ ಹೋರಾಟಕ್ಕೆ ನ್ಯಾಯ ಸಿಗದೇ ಇದ್ದರೆ ಇನ್ನಷ್ಟು ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದರು. ಮುಖ್ಯಮಂತ್ರಿ, ಉಸ್ತುವಾರಿ ಸಚಿವ, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿ ಅನೇಕರಿಗೆ ಪ್ರತಿಭಟನಾಕಾರರು ತಮ್ಮ ಮನವಿ ರವಾನಿಸಿದರು.