ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮುಂಡಗೋಡಿನ ಕಿರಣ ಸೊಳಂಕಿ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಐದು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಕಿರಣ ಸೊಳಂಕಿ ಅವರಿಗೆ ಶಿರಸಿ ಸಹಾಯಕ ಆಯುಕ್ತೆ ಕಾವ್ಯರಾಣಿ ಅವರು ಗಡಿಬಿಟ್ಟು ಹೋಗುವಂತೆ ಸೂಚಿಸಿದ್ದಾರೆ.
ಕಿರಣ ಸೊಳಂಕಿ ಅವರು ಮುಂಡಗೋಡಿನ ಆನಂದನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. 26ನೇ ವಯಸ್ಸಿನಲ್ಲಿಯೇ ಅವರು ಕೊಲೆ, ಸುಲಿಗೆ, ಬೆದರಿಕೆ ಸೇರಿ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಕಿರಣ ಸೋಳಂಕಿ ಅವರ ಗಡಿಪಾರಿಗೆ ಪೊಲೀಸರು ಶಿಫಾರಸ್ಸು ಮಾಡಿದ್ದು, ಆ ಕಡತ ಜಿಲ್ಲಾಧಿಕಾರಿ ಕಚೇರಿ ಸೇರಿತ್ತು. ಉಪವಿಭಾಗಾಧಿಕಾರಿ ಕಾವ್ಯರಾಣಿ ಅವರು ಅದನ್ನು ವಿಚಾರಣೆಗೆ ಒಳಪಡಿಸಿದರು.
ಕಿರಣ ಸೋಳಂಕಿ ಅವರಿಗೆ ತಮ್ಮ ಅಹವಾಲು ಹೇಳಿಕೆಗೆ ಕಾವ್ಯರಾಣಿ ಅವರು ಸಾಕಷ್ಟು ಸಮಯ ಕೊಟ್ಟರು. ಕಿರಣ ಸೋಳಂಕಿ ಅವರಿಗೆ ಪ್ರಕರಣವೊಂದರಲ್ಲಿ 10 ವರ್ಷ ಜೈಲು ಶಿಕ್ಷೆ ಆಗಿರುವುದನ್ನು ಕಾವ್ಯರಾಣಿ ಅವರು ಗಮನಿಸಿದರು. ನ್ಯಾಯಾಲದಿಂದ ಜಾಮೀನುಪಡೆದು ಊರಿಗೆ ಮರಳಿದ ಕಿರಣ ಸೋಳಂಕಿ ಅದಾದ ನಂತರವೂ ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ನಿರ್ಧರಿಸಿದರು.
ಸದ್ಯ 3 ತಿಂಗಳ ಅವಧಿಗೆ ಕಿರಣ ಸೋಳಂಕಿ ಅವರನ್ನು ಗಡಿಪಾರು ಮಾಡಲಾಗಿದೆ. ಪೊಲೀಸರು ಕಿರಣ ಸೋಳಂಕಿ ಅವರನ್ನು ಯಾದಗಿರಿಗೆ ಕರೆದೊಯ್ದು ಬಿಟ್ಟಿದ್ದಾರೆ.