ಜನಪ್ರತಿನಿಧಿಗಳಾಗಿ ಜನಮನ್ನಣೆಗಳಿದ್ದ ಮಹಿಳೆಯರಿಬ್ಬರು ಭಾನುವಾರ ದಿಢೀರ್ ಆಗಿ ಸಾವನಪ್ಪಿದ್ದಾರೆ. ಶಿರಸಿಯ ಗೀತಾ ಬೋವಿ ಹಾಗೂ ಅಂಕೋಲಾದ ಸುಮಿತ್ರಾ ಬಂಟ್ ಅವರು ಈ ದಿನ ಹೃದಯಘಾತಕ್ಕೆ ಒಳಗಾಗಿದ್ದಾರೆ.
ಗೀತಾ ಬೋವಿ ಅವರು ಶಿರಸಿಯ ಇಟಗುಳಿ ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷರಾಗಿದ್ದರು. ಸದ್ಯ ಅವರು ಅದೇ ಪಂಚಾಯತ ವ್ಯಾಪ್ತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಜನಪರ ಕೆಲಸಗಳಿಂದ ಗುರುತಿಸಿಕೊಂಡಿದ್ದ ಅವರು ಕಾಂಗ್ರೆಸ್ ಕಾರ್ಯಕರ್ತರಾಗಿಯೂ ಸಕ್ರೀಯವಾಗಿದ್ದರು. ತಮ್ಮ ಜೀವಿತಾವಧಿಯ ಕೊನೆಕ್ಷಣದವರೆಗೂ ಅವರು ಲವಲವಿಕೆಯಿಂದಲೇ ಇದ್ದರು. ಭಾನುವಾರ ಬೆಳಗ್ಗೆ ಏಕಾಏಕಿ ಅವರು ಕುಸಿದು ಬಿದ್ದು ಸಾವನಪ್ಪಿದರು. ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ದುಡಿದು ಸಂಘಟಿಸಿದ ಗೀತಾ ಬೋವಿ ಅವರ ಅವರ ನಿಧನದಿಂದ ಶಾಸಕ ಭೀಮಣ್ಣ ನಾಯ್ಕ ಅವರು ಆಘಾತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅವರು ಈ ದಿನದ ತಮ್ಮ ಎಲ್ಲಾ ಪೂರ್ವನಿಗದಿತ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ.
ಸುಮಿತ್ರಾ ಬಂಟ್ ಅವರು ಅಂಕೋಲಾದ ಬಾವಿಕೇರಿ ಗ್ರಾಮ ಪಂಚಾಯತ ಸದಸ್ಯರಾಗಿದ್ದರು. ಪಕ್ಷೇತರವಾಗಿ ಆಯ್ಕೆಯಾದ ಅವರು ಕೇಣಿ ಭಾಗವನ್ನು ಪ್ರತಿನಿಧಿಸಿದ್ದರು. ಅದಾದ ನಂತರ ಬಿಜೆಪಿಗೆ ಅವರು ತಮ್ಮ ಬೆಂಬಲ ಸೂಚಿಸಿದ್ದರು. ತಮ್ಮ 70ನೇ ವಯಸ್ಸಿನಲ್ಲಿಯೂ ಅವರು ಉತ್ಸಾಹದಿಂದ ಇರುತ್ತಿದ್ದರು. ಎಲ್ಲರಿಗಿಂತ ಹಿರಿಯ ಸದಸ್ಯರಾಗಿದ್ದ ಅವರು ಜನಪರ ಕೆಲಸದ ಮೂಲಕ ಮೆಚ್ಚುಗೆಗಳಿಸಿದ್ದರು. ಕಾರ್ಯಕ್ರಮಗಳ ಸಂಘಟನೆಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರು. ಅವರ ಬಳಿ ಸ್ವಂತ ವಾಹನ ಇಲ್ಲದಿದ್ದರೂ ಸರ್ಕಾರಿ ಕಾರ್ಯಕ್ರಮಗಳಿಗೆ ಎಲ್ಲರಿಗಿಂತ ಮೊದಲು ಬರುತ್ತಿದ್ದರು. `ಇನ್ನು ಎರಡು ತಿಂಗಳಿನಲ್ಲಿ ಅಧಿಕಾರದ ಅವಧಿ ಮುಗಿಯಲಿದ್ದು, ಎಲ್ಲಾ ಸದಸ್ಯರು ಪ್ರವಾಸಕ್ಕೆ ಹೋಗೋಣ’ ಎಂದು ಅವರು ಹುರಿದುಂಬಿಸಿದ್ದರು. ಆದರೆ, ಅಷ್ಟರೊಳಗೆ ಅವರು ಈ ಲೋಕದ ಯಾತ್ರೆ ಮುಗಿಸಿದರು.