ಉತ್ತರ ಕನ್ನಡ ಜಿಲ್ಲೆಯ ಎಂಟು ನೋಂದಣಾಧಿಕಾರಿ ಕಚೇರಿ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಎಲ್ಲಾ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದ್ದು, ದಾಖಲೆಗಳ ಶೋಧ ನಡೆಸಿದ್ದಾರೆ.
ಧಾರವಾಡದ ಯೂಟೂಬರ್ ಮುಕಳೆಪ್ಪ ಅವರು ನಕಲಿ ದಾಖಲೆ ನೀಡಿ ಮುಂಡಗೋಡಿನ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಆಗಿದ್ದರು. ಹಿಂದು ಯುವತಿ ಗಾಯತ್ರಿ ಅವರನ್ನು ಫುಸಲಾಯಿಸಿ ಮದುವೆ ಆದ ಕಾರಣ ಗಾಯತ್ರಿ ಅವರ ತಾಯಿ ಶಿವಕ್ಕ ಅವರು ಕಿಡಿಕಾರಿದ್ದರು. ಇದೇ ವಿಷಯವಾಗಿ ವಿವಿಧ ಕಡೆ ಪ್ರತಿಭಟನೆಗಳು ನಡೆದಿದ್ದು, ನಕಲಿ ದಾಖಲೆ ಕೊಟ್ಟರೂ ವಿವಾಹ ಮಾಡಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತವಾಗಿತ್ತು. ಮುಂಡಗೋಡು ನೋಂದಣಾಧಿಕಾರಿ ಕಚೇರಿ ಅಧಿಕಾರಿ-ಸಿಬ್ಬಂದಿ ವಿರುದ್ಧ ಪೊಲೀಸ್ ಪ್ರಕರಣ ಸಹ ದಾಖಲಾಗಿತ್ತು.
ಅದರ ಮುಂದುವರೆದ ಭಾಗವಾಗಿ ನೋಂದಣಾಧಿಕಾರಿ ಕಚೇರಿಯಲ್ಲಿ ನಕಲಿ ದಾಖಲೆ ನೀಡಿ ವಿವಾಹವಾದ ಅನೇಕ ಪ್ರಕರಣಗಳಿರುವ ಬಗ್ಗೆ ಜನ ದೂರಿದ್ದರು. ಈ ಹಿನ್ನಲೆ ಲೋಕಾಯುಕ್ತ ಪೊಲೀಸರು ಬುಧವಾರ ಮುಂಡಗೋಡು ಸೇರಿ ಜಿಲ್ಲೆಯ ವಿವಿಧ ನೋಂದಣಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿದರು. ಕಾರವಾರ, ಕುಮಟಾ, ಶಿರಸಿ, ಸಿದ್ದಾಪುರ, ಹಳಿಯಾಳ, ಜೋಯಿಡಾ, ಯಲ್ಲಾಪುರದಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಶೋಧ ನಡೆಸಿದ್ದಾರೆ.