ಶಂಕರ್ ಆಚಾರಿ ಅವರು ಕಷ್ಟಪಟ್ಟು ಬೆಳಸಿದ್ದ ಕಟ್ಟಿಗೆ ಮಿಲ್ ಬೆಂಕಿಗೆ ಆಹುತಿಯಾಗಿದೆ. ತಮ್ಮ ಜೀವನವಿಡೀ ದುಡಿದು ಕಟ್ಟಿದ್ದ ಕಟ್ಟಡದ ಜೊತೆ 35 ಲಕ್ಷ ರೂ ಮೌಲ್ಯದ ಸಾಮಗ್ರಿಗಳು ಅಗ್ನಿಗೆ ಆಹುತಿಯಾಗಿದೆ.
ಗೋಕರ್ಣ ಬಳಿಯ ಹನೇಹಳ್ಳಿ ಗ್ರಾಮ ಪಂಚಾಯತ ಸಮೀಪದ ಹೊಸ್ಕೇರಿಯಲ್ಲಿ ಶಂಕರ್ ಆಚಾರಿ ಅವರು ಕಟ್ಟಿಗೆ ಮಿಲ್ ನಡೆಸುತ್ತಿದ್ದರು. ಶನಿವಾರ ಬೆಳಗ್ಗೆ ಅವರ ಮಿಲ್’ಗೆ ಬೆಂಕಿ ತಗುಲಿತು. ವಿದ್ಯುತ್ ಶಾರ್ಟ ಸರ್ಕೀಟ್ ಕಾರಣ ಅನಾಹುತ ನಡೆದ ಅನುಮಾನಗಳಿದ್ದು, ಸಮೀಪದಲ್ಲಿ ಅಗ್ನಿಶಾಮಕ ಠಾಣೆ ಇಲ್ಲದ ಕಾರಣ ಬೆಂಕಿ ಆರಿಸಲು ಸಮಸ್ಯೆ ಉಂಟಾಯಿತು.
ಗೋಕರ್ಣದಲ್ಲಿ ಜನರ ಬೇಡಿಕೆಯಿದ್ದರೂ ಅಗ್ನಿಶಾಮಕ ಠಾಣೆ ಇಲ್ಲದ ಕಾರಣ ಅಂಕೋಲಾ ಹಾಗೂ ಕುಮಟಾದಿಂದ ಹೊಸ್ಕೇರಿಗೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದರು. ಅಲ್ಲಿಂದ ಅವರು ಬರುವಷ್ಟರೊಳಗೆ ಬಹುತೇಕ ಕಟ್ಟಡ ಸುಟ್ಟು ಕರಕಲಾಗಿತ್ತು.
ಅದಾಗಿಯೂ ಅಗ್ನಿಶಾಮಕ ಸಿಬ್ಬಂದಿ ಸಾಹಸ ಮಾಡಿದರು. ಬೆಂಕಿ ಬೇರೆ ಕಡೆ ಹರಡದಂತೆ ಮುನ್ನಚ್ಚರಿಕೆವಹಿಸಿದರು. ಹೊತ್ತಿ ಉರಿಯುತ್ತಿದ್ದ ಕಟ್ಟಿಗೆಗೆ ಅಂಟಿದ ಅಗ್ನಿಯನ್ನು ಆರಿಸಿದರು. ಗ್ರಾಮ ಲೆಕ್ಕಾಧಿಕಾರಿ ರೇಖಾ ನಾಯ್ಕ, ಹಾಗೂ ಸ್ಥಳೀಯ ಗ್ರಾಮ ಪಂಚಾಯತ ಕಾರ್ಯದರ್ಶಿ ಶ್ರೀಧರ ಬೋಮಕರ ಅವರ ಜೊತೆ ಗೋಕರ್ಣ ಪಿಎಸ್‌ಐ ಖಾದರ ಬಾಷಾ ಸ್ಥಳ ಭೇಟಿ ಮಾಡಿದರು.