ಕಾರವಾರದ ಕಾರಾಗೃಹದಲ್ಲಿ ಮತ್ತೆ ಕೈದಿಗಳ ಕೂಗಾಟ-ಹೊಡೆದಾಟ ನಡೆದಿದೆ. ಮಾದಕ ವ್ಯಸನ ಕೊಡದ ಕಾರಣ ಜೈಲಿನಲ್ಲಿದ್ದ ಟಿವಿ, ಬಾಗಿಲಿನ ಗಾಜುಗಳನ್ನು ಕೈದಿಗಳು ಪುಡಿ ಪುಡಿ ಮಾಡಿದ್ದಾರೆ. ಕಾರಾಗೃಹ ಸಿಬ್ಬಂದಿ ಮೇಲೆಯೂ ಆಕ್ರಮಣ ನಡೆಸಿದ್ದು, ಸಮವಸ್ತ್ರದಲ್ಲಿದ್ದ ಸಿಬ್ಬಂದಿಯನ್ನು ಕಾಲಿನಿಂದ ತುಳಿದು ನೋವು ಮಾಡಿದ್ದಾರೆ. ಜೊತೆಗೆ ಜೈಲು ಉಸ್ತುವಾರಿವಹಿಸಿರುವ ಸರ್ಕಾರಿ ಸಿಬ್ಬಂದಿ ವಿರುದ್ಧವೇ ನ್ಯಾಯಾಧೀಶರಿಗೆ ದೂರು ನೀಡುವುದಾಗಿ ಕೈದಿಗಳು ಬೆದರಿಸಿದ್ದಾರೆ!
ಕಳೆದ ವಾರ ಕಾರಾಗೃಹದ ಒಳಗೆ ಪೊಲೀಸರು ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದ್ದರು. ಆಗ, ಅಲ್ಲಿ ಮಾದಕ ವಸ್ತುಗಳು ಪತ್ತೆಯಾಗಿದ್ದವು. ಅದರ ಜೊತೆ ನಿಷೇಧಿತ ಮೊಬೈಲ್ ಸಹ ಸಿಕ್ಕಿತ್ತು. ಈ ಹಿನ್ನಲೆ ಜೈಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಶುರು ಮಾಡಿದ್ದು, ಕೈದಿಗಳಿಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಹಿನ್ನಲೆ ಮೂರು ದಿನಗಳ ಹಿಂದೆ ಬಂಧಿತ ಕೈದಿಗಳಿಬ್ಬರು ಗಲಾಟೆ ಮಾಡಿದ್ದರು. ಮಾದಕ ವ್ಯಸನ ಸಿಗದ ಕಾರಣ ಕಾರಾಗೃಹ ಸಿಬ್ಬಂದಿ ಮೇಲೆ ಕೈ ಮಾಡಿದ್ದರು.
ಅದಾದ ನಂತರ ಇದೀಗ ಮತ್ತೆ ಕಾರಾಗೃಹದ ಸಿಬ್ಬಂದಿ ಮೇಲೆ ಆರು ಕೈದಿಗಳು ದಾಳಿ ಮಾಡಿದ್ದಾರೆ. ಜೈಲಿನಲ್ಲಿದ್ದ ಟಿವಿಯನ್ನು ಒಡೆದು ಹಾಕಿದ್ದಾರೆ. ಬಾಗಿಲಿಗೆ ಅಳವಡಿಸಿದ್ದ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ. ಅಲ್ಲಿದ್ದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಜೈಲಿನಲ್ಲಿದ್ದ ಕೈದಿಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರೂ ಸಮಾಧಾನವಾಗಿಲ್ಲ. ಈ ವೇಳೆ ರಕ್ಷಣೆಗಾಗಿ ಸರ್ಕಾರಿ ಸಿಬ್ಬಂದಿ ಕೈದಿಗಳ ಕಡೆ ಲಾಠಿ ಬೀಸಿದ್ದಾರೆ. ಅದಾಗಿಯೂ ಅವರು ಸುಮ್ಮನಾಗಿಲ್ಲ.
ಮಂಗಳೂರಿನ ಜೈಲಿನಲ್ಲಿದ್ದ ಕೆಲ ಕೈದಿಗಳನ್ನು ಕಾರವಾರಕ್ಕೆ ಸ್ಥಳಾಂತರಿಸಲಾಗಿದ್ದು, ಅವರಿಂದಲೇ ರಂಪಾಟ ಜೋರಾಗಿದೆ. ಮಂಗಳೂರಿನಲ್ಲಿ ಸ್ಥಳಾವಕಾಶ ಕೊರತೆ ಹಿನ್ನಲೆ ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾದವರನ್ನು ಕಾರವಾರ ಜೈಲಿಗೆ ವರ್ಗಾಯಿಸಲಾಗಿದೆ.