ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗೆ ಕದ್ದು ಮುಚ್ಚಿ ಪ್ರಯತ್ನ ಮುಂದುವರೆದಿದೆ. ಸಾರ್ವಜನಿಕರ ವಿರೋಧದ ನಡುವೆಯೂ ಗುರುತು-ಪರಿಚಯವಿಲ್ಲದ ಜನ ಈ ಯೋಜನೆಗಾಗಿ ಸರ್ವೇ ಕೆಲಸ ಶುರು ಮಾಡಿದ್ದಾರೆ.
Advertisement. Scroll to continue reading.
ಶಿರಸಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ತೆಲಗು ಮಾತನಾಡುವ ಜನ ತಿರುಗಾಡುತ್ತಿದ್ದಾರೆ. ಭೂಮಿ ಸರ್ವೇ ಮಾಡುವ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಜನ ಪ್ರಶ್ನಿಸಿದರೂ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಗುರುತು-ಪರಿಚಯವನ್ನು ಸಹ ಬಿಟ್ಟು ಕೊಡುತ್ತಿಲ್ಲ. ಕದ್ದು-ಮುಚ್ಚಿ ಸರ್ವೇ ಕೆಲಸಕ್ಕೆ ಬಂದಿದ್ದವರಿಗೆ ಶನಿವಾರ ಜನ ತರಾಠೆಗೆ ತೆಗೆದುಕೊಂಡಿದ್ದಾರೆ.
ಮೊನ್ನೆ ಸರ್ವೇ ನಕಾಶೆಯೊಂದನ್ನು ಹಿಡಿದ ಕೆಲವರು ಹೊಳೆ ತೀರ ಪ್ರದೇಶ ಸುತ್ತಾಟ ನಡೆಸಿದ್ದರು. ಸ್ಥಳೀಯರು ವಿಚಾರಿಸಿದಾಗ ಅವರು `ರಸ್ತೆ ಸರ್ವೇ ಮಾಡಲು ಬಂದಿದ್ದೇವೆ’ ಎಂದು ಉತ್ತರಿಸಿದ್ದರು. `ರಸ್ತೆ ಸರ್ವೇ ಮಾಡಲು ಬಂದವರು ಹೊಳೆ ಕಡೆ ಏಕೆ ಹೋದರು?’ ಎಂದು ಜನ ಪ್ರಶ್ನಿಸಿದಾಗ ಅದಕ್ಕೆ ಉತ್ತರ ಸಿಗಲಿಲ್ಲ. `ಸರಿಯಾದ ಮಾಹಿತಿ ಕೊಡಿ’ ಎಂದು ಅಲ್ಲಿನವರು ಜೋರಾದಾಗ ಸರ್ವೇಗೆ ಬಂದವರು ಜಾರಿಕೊಂಡರು.
Advertisement. Scroll to continue reading.
ಶನಿವಾರ ಭೂ ಗರ್ಭ ಇಲಾಖೆಯ ಗಣಿಗಾರಿಕೆ ವಿಭಾಗ ಎನ್ನುವ ಹೆಸರಿನಲ್ಲಿ ಶಿರಸಿಯ ಮುರೇಗಾರು ರಸ್ತೆಯಲ್ಲಿ ಅಪರಿಚಿತರಿಂದ ಮತ್ತೆ ಸರ್ವೇ ಕಾರ್ಯ ಶುರುವಾಯಿತು. ಈ ಸುದ್ದಿ ವ್ಯಾಪಕ ಪ್ರಮಾಣದಲ್ಲಿ ಹಬ್ಬಿದ್ದು, ನೂರಾರು ಜನ ಸ್ಥಳಕ್ಕೆ ಜಮಾಯಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಅಲ್ಲಿಗೆ ಧಾವಿಸಿದರು. ಅವರೆಲ್ಲರೂ ಸೇರಿ ಹಲವು ಪ್ರಶ್ನೆ ಕೇಳಿದರು. ಆದರೆ, ಸಮೀಕ್ಷೆಗೆ ಬಂದವರು ಸರಿಯಾದ ಮಾಹಿತಿ ನೀಡುವ ಹಾಗೇ ಕಾಣಲಿಲ್ಲ. ಮುರೇಗಾರ್ ಹಾಗೂ ಸಾಲ್ಕಣಿ ಭಾಗದ ಸ್ಥಳೀಯ ಆಡಳಿತಕ್ಕೆ ಸಹ ಈ ಸಮೀಕ್ಷಾ ಕಾರ್ಯದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ಈ ಎಲ್ಲಾ ಹಿನ್ನಲೆ ಆ ಊರಿನವರೆಲ್ಲರೂ ಸೇರಿ ಸರ್ವೇ ಕೆಲಸ ನಿಲ್ಲಿಸುವಂತೆ ತಾಕೀತು ಮಾಡಿದರು. ಜನರ ಒಗ್ಗಟ್ಟು ನೋಡಿದ ಸರ್ವೇ ಸಿಬ್ಬಂದಿ ಅಲ್ಲಿಂದ ವಾಪಸ್ಸು ಹೋದರು. ಸದ್ಯ ಊರಿನ ಜನ ಶಾಂತಿಯುತವಾಗಿಯೇ ಅವರನ್ನು ಅಲ್ಲಿಂದ ಕಳುಹಿಸಿದ್ದು, ಯಾವುದೇ ಕಾರ್ಯ ಮಾಡುವ ಮುನ್ನ ಅಧಿಕೃತ ಮಾಹಿತಿ ನೀಡುವಂತೆ ಒತ್ತಾಯಿಸಿದರು. ಜೊತೆಗೆ `ಅವೈಜ್ಞಾನಿಕ ಯೋಜನೆಗಳನ್ನು ಅನುಷ್ಠಾನಕ್ಕೆ ಬಿಡುವುದಿಲ್ಲ’ ಎಂದು ವಿವರಿಸಿದರು.