ಕಳೆದ 20 ವರ್ಷಗಳಿಂದ ಖಾಲಿ ಹೊಡೆಯುತ್ತಿದ್ದ ಸರ್ಕಾರಿ ಕಚೇರಿಗೆ ಸದ್ಯ ಮರುಜೀವ ಬಂದಿದೆ. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕೆಎಎಸ್ ಆಯ್ಕೆ ಶ್ರೇಣಿಯ ಅಧಿಕಾರಿ ರವಿಚಂದ್ರ ನಾಯಕ ಅವರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ 28 ವರ್ಷಗಳ ಹಿಂದೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿ ಶುರು ಮಾಡಲಾಗಿತ್ತು. 1998ರಲ್ಲಿ ಶುರುವಾದ ಈ ಕಚೇರಿಗೆ ಒಬ್ಬರು ಕೆಎಎಸ್ ಶ್ರೇಣಿಯ ಅಧಿಕಾರಿಯಿದ್ದರು. ಅವರು ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿದ್ದು, ಅವರ ಜೊತೆ ಶಿರಸ್ತೇದಾರ್, ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೂ ಸಿಬ್ಬಂದಿ ಇದ್ದರು. ಈ ಎಲ್ಲದರ ನಡುವೆ ಒಮ್ಮೆ ಅಧಿಕಾರಿಯೊಬ್ಬರು ಈ ಹುದ್ದೆಗೆ ಖಾಯಂ ಆಗಿ ಬಂದಿದ್ದರು. ಆದರೆ, ಅವರಿಗೂ ಅಲ್ಲಿ ಯಾವುದೇ ಕೆಲಸವಿಲ್ಲದ ಕಾರಣ ಕೆಲ ತಿಂಗಲು ಕೆಲಸ ನಿರ್ವಹಿಸಿ, ಬೇರೆಡೆ ಹೋಗಿದ್ದರು. ಅದಾದ ನಂತರ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ನೆನೆಗುದಿಗೆ ಬಿದ್ದ ಕಾರಣ ಆ ಹುದ್ದೆಗಳೆಲ್ಲವೂ ಖಾಲಿಯಾದವು. ಅದಾದ ನಂತರ ಕೆಲವರಿಗೆ ಪ್ರಭಾರಿಯಾಗಿ ಆ ಹುದ್ದೆ ನೀಡಲಾಗಿದ್ದು, ಈವರೆಗೂ ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ ಅವರನ್ನು ಅಲ್ಲಿ ನಿಯೋಜಿಸಲಾಗಿತ್ತು. ಸದ್ಯ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಮರುಜೀವ ಬಂದಿದ್ದರಿoದ ಸರ್ಕಾರ ರವಿಚಂದ್ರ ನಾಯಕ ಅವರನ್ನು ಈ ಹುದ್ದೆಗೆ ನೇಮಕ ಮಾಡಿದೆ.
1998ರಲ್ಲಿ ಈ ಕಚೇರಿ ಶುರುವಾದಾಗ ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕುಗಳ ಖಾಸಗಿ ಹಾಗೂ ಅರಣ್ಯ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆದಿತ್ತು. ಆ ಅವಧಿಯಲ್ಲಿ ಕಾರವಾರದಲ್ಲಿರುವ ಭೂ ಸ್ವಾಧೀನಾಧಿಕಾರಿ ಕಚೇರಿಯಿಂದಲೇ ಸ್ವಾಧೀನ ಪ್ರಕ್ರಿಯೆ ನಡೆಸಲಾಗಿತ್ತು. ಆ ವೇಳೆ 4ಎ ನೋಟಿಪಿಕೇಶನ್ ಮಾಡಿ, ಪರಿಹಾರ ನೀಡುವ ಕಾರ್ಯವನ್ನು ಇಲ್ಲಿಂದಲೇ ನೀಡಲಾಗಿತ್ತು. 2006ರಲ್ಲಿ ಯೋಜನೆಗೆ ತಡೆ ಬಂದ ನಂತರ ಭೂ ಸ್ವಾಧೀನ ಪ್ರಕ್ರಿಯೆಯೂ ಸ್ಥಗಿತವಾಗಿತ್ತು. ಆ ಕಚೇರಿ ಹಾಗೇ ಇದ್ದರೂ ಅಲ್ಲಿದ್ದವರಿಗೆ ಕೆಲಸವಿರಲಿಲ್ಲ. ಹೀಗಾಗಿ ಕಚೇರಿ ಮುಂದುವರೆದರೂ ಪ್ರಭಾರಿ ಹುದ್ದೆಯಲ್ಲಿದ್ದವರೇ ಅದನ್ನು ನಿಭಾಯಿಸುತ್ತಿದ್ದರು.
ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಭೂ ಸ್ವಾಧೀನಗೊಳ್ಳಲಿರುವ ಗ್ರಾಮಗಳ ಪಟ್ಟಿಯನ್ನು ನೈರುತ್ಯ ರೈಲ್ವೆ ಇತ್ತೀಚೆಗೆ ಪ್ರಕಟ ಮಾಡಿದ್ದರಿಂದ ಯಲ್ಲಾಪುರ, ಅಂಕೋಲಾ ಭಾಗದಲ್ಲಿ ಭೂ ಸ್ವಾಧೀನದ ಬಗ್ಗೆ ಚರ್ಚೆ ಜೋರಾಗಿದೆ. ಯೋಜನೆಗಾಗಿ ರಾಷ್ಟ್ರೀಯ ಹೆದ್ದಾರಿ 52 ರಿಂದ ಬಹು ದೂರದಲ್ಲಿರುವ ಕಳಚೆ, ತೆಲಂಗಾರ ಮುಂತಾದ ಗ್ರಾಮಗಳ ಹೆಸರನ್ನೂ ಸೇರಿಸಲಾಗಿದೆ. ಇನ್ನೊಂದೆಡೆ ರಾಷ್ಟ್ರೀಯ ಹೆದ್ದಾರಿಯ ಇನ್ನೊಂದು ಪಕ್ಕದಲ್ಲಿರುವ ಗ್ರಾಮಗಳನ್ನೂ ಹೆಸರಿಸಲಾಗಿದೆ. ರೈಲ್ವೆ ಮಾರ್ಗ ಯಾವ ರೀತಿ ಹೋಗಲಿದೆ ಎಂಬ ಎಂಬ ಸ್ಪಷ್ಟತೆ ಇದುವರೆಗೂ ಸಿಕ್ಕಿಲ್ಲ. ಇದರಿಂದ ಜನ ಗೊಂದಲದಲ್ಲಿದ್ದಾರೆ.