ಬೀದಿ ನಾಯಿಗೆ ಬಿಸ್ಕತ್ ಹಾಕಿದ ವಿಷಯವಾಗಿ ನಾಲ್ವರ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ಒಮ್ಮೆ ರಾಜಿ-ಸಂದಾನದಲ್ಲಿ ಅಂತ್ಯವಾಗಿದ್ದರೂ ಅದೇ ವಿಷಯವಾಗಿ ಮತ್ತೆ ಹೊಡೆದಾಟ ನಡೆದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.
ನವೆಂಬರ್ 23ರಂದು ಭಟ್ಕಳ ಬಸ್ ನಿಲ್ದಾಣ ಬಳಿಯ ಅಂಗಡಿಯಲ್ಲಿದ್ದ ಮನೋಜ ತಲವಾರ ಎಂಬಾತರು ಅಲ್ಲಿ ಬಂದಿದ್ದ ನಾಯಿಗೆ ಸಮೋಸಾ-ಬಿಸ್ಕತ್ ಹಾಕಿದ್ದರು. ಅವರು ಈ ತಿಂಡಿ ಹಾಕುವ ವೇಳೆ ಮಂಡಳ್ಳಿ ನೀರಗದ್ದೆಯ ಮನೋಜ ಹರಿಶ್ಚಂದ್ರ ನಾಯ್ಕ ಅವರು ಅಲ್ಲಿಗೆ ಬಂದಿದ್ದು, ನಾಯಿಗೆ ತಿಂಡಿ ಹಾಕುವುದನ್ನು ವಿರೋಧಿಸಿದ್ದರು. `ನನ್ನನ್ನು ನೋಡುತ್ತ ನಾಯಿ ಕರೆದು ತಿಂಡಿ ಹಾಕುತ್ತೇಯಾ?’ ಎಂದು ಪ್ರಶ್ನಿಸಿ ಮನೋಜ ನಾಯ್ಕ ಅವರು ಜಗಳ ಮಾಡಿದ್ದರು. ಅವರ ಜಗಳ ತಾರಕ್ಕೇರಿದ್ದು, ಪೊಲೀಸರು ರಾಜಿ ಸಂಧಾನ ಮಾಡಿ ಮುಗಿಸಿದ್ದರು.
ನವೆಂಬರ್ 24ರಂದು ಮತ್ತೆ ಆ ಅಂಗಡಿ ಬಳಿ ಬಂದ ಮನೋಜ ನಾಯ್ಕ ಅವರು `ಪೊಲೀಸರ ಬಳಿ ದೂರುವೆಯಾ?’ ಎಂದು ಪ್ರಶ್ನಿಸಿ ಮತ್ತೆ ಜಗಳ ಶುರು ಮಾಡಿದರು. ಈ ವೇಳೆ ಮನೋಜ ನಾಯ್ಕ ಅವರ ಜೊತೆ ಅವರ ಸಹೋದರ ಹರೀಶ ನಾಯ್ಕ ಸಹ ಇದ್ದರು. ಜಗಳ ತಡೆಯುವುದಕ್ಕಾಗಿ ಬಂದ ಭಟ್ಕಳ ಗಾಂಧೀನಗರದ ಕುಡ್ತಮ್ಮನಮನೆಯ ಸುಕ್ರಯ್ಯ ನಾರಾಯಣ ನಾಯ್ಕ (45) ಅವರ ಮೇಲೆ ಆ ಇಬ್ಬರು ದಾಳಿ ಮಾಡಿದರು. ತಂದೆಯ ಮೇಲೆ ನಡೆಯುವ ದಾಳಿ ತಡೆಯಲು ಮುಂದಾದ ಗಣೇಶ ನಾಯ್ಕ ಅವರು ಪೆಟ್ಟು ತಿಂದರು.
ಕಬ್ಬಿಣದ ರಾಡಿನಿಂದ ತಲೆಗೆ ಪೆಟ್ಟು ಬಿದ್ದ ಕಾರಣ ಸುಕ್ರಯ್ಯ ನಾರಾಯಣ ನಾಯ್ಕ ಅವರು ಆಸ್ಪತ್ರೆಗೆ ದಾಖಲಾದರು. ಚಿಕಿತ್ಸೆಪಡೆದ ಅವರು ತಮ್ಮ ಮೇಲಾದ ದಾಳಿಯ ಬಗ್ಗೆ ಪೊಲೀಸರಿಗೆ ವಿವರಿಸಿ, ಹರೀಶ ನಾಯ್ಕ ಹಾಗೂ ಮನೋಜ ನಾಯ್ಕ ವಿರುದ್ಧ ದೂರಿದರು.