ಎಲೆಚುಕ್ಕಿ ರೋಗ, ಫಸಲಿನಲ್ಲಿನ ಏರಿಳಿತದ ನಡುವೆ ಅಡಿಕೆ ಬೆಳೆ ಉಳಿಸಿಕೊಂಡಿದ್ದ ರೈತರಿಗೆ ಕಳ್ಳರ ಕಾಟ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಲ್ಲಾಪುರದ ವಿಶ್ವೇಶ್ವರ ಹೆಗಡೆ ಅವರ ತೋಟಕ್ಕೆ ನುಗ್ಗಿದ ಕಳ್ಳರು ಹಸಿ ಅಡಿಕೆಯನ್ನು ಕದ್ದು ಪರಾರಿಯಾಗಿದ್ದಾರೆ.
Advertisement. Scroll to continue reading.
ಯಲ್ಲಾಪುರದ ಮಂಚಿಕೇರಿ ಬಳಿಯ ಕಂಪ್ಲಿಯಲ್ಲಿ ವಿಶ್ವೇಶ್ವರ ಗಜಾನನ ಹೆಗಡೆ ಅವರು ವಾಸವಾಗಿದ್ದಾರೆ. 58 ವರ್ಷದ ಅವರು ಅಡಿಕೆ ಮರಗಳ ಬಗ್ಗೆ ಅಪಾರ ಕಾಳಜಿಹೊಂದಿದ್ದು, ಆ ಮರಗಳ ಆರೈಕೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಸೊಪ್ಪು-ಗೊಬ್ಬರ ಹಾಕಿ ಅವರು ಪೋಷಿಸಿದ್ದ ಅಡಿಕೆ ಮರ ಏರಿದ ಕಳ್ಳರು ಅಲ್ಲಿದ್ದ ಅಡಿಕೆ ಅಪಹರಿಸಿದ್ದಾರೆ.
ಡಿಸೆಂಬರ್ 27ರ ಸಂಜೆ 7 ಗಂಟೆಯವರೆಗೂ ವಿಶ್ವೇಶ್ವರ ಹೆಗಡೆ ಅವರು ತೋಟ ಸುತ್ತಾಟ ನಡೆಸಿದ್ದು, ಅದಾದ ನಂತರ ಕಳ್ಳತನ ನಡೆದಿದೆ. ಡಿಸೆಂಬರ 28ರ ಸಂಜೆ 4 ಗಂಟೆಗೆ ಮತ್ತೆ ತೋಟಕ್ಕೆ ಹೋದಾಗ ಅಲ್ಲಿದ್ದ ಅಡಿಕೆ ಮರದಲ್ಲಿದ್ದ ಫಸಲು ಕಾಣೆಯಾಗಿದೆ. ಸುಮಾರು 30 ಮರಗಳನ್ನು ಬೋಳಿಸಿದ ಕಳ್ಳರು 2.40 ಕ್ವಿಂಟಾಲ್ ಹಸಿ ಅಡಿಕೆ ದೋಚಿದ್ದಾರೆ.
ಕಳ್ಳರ ಕಾಟದಿಂದ 14 ಸಾವಿರ ರೂ ನಷ್ಟವಾದ ಬಗ್ಗೆ ವಿಶ್ವೇಶ್ವರ ಹೆಗಡೆ ಅವರು ಹೇಳಿದ್ದಾರೆ. ಕಳ್ಳರನ್ನು ಹುಡುಕಿ ಶಿಕ್ಷಿಸಬೇಕು ಎಂದು ಅವರು ಪೊಲೀಸ್ ದೂರು ನೀಡಿದ್ದು, ಯಲ್ಲಾಪುರ ಪೊಲೀಸರು ಕಳ್ಳರ ಶೋಧ ನಡೆಸಿದ್ದಾರೆ.