ಭೂಮಿ ಹಕ್ಕಿಗಾಗಿ ಹೋರಾಟ ನಡೆಸಿರುವ ಅರಣ್ಯ ಅತಿಕ್ರಮಣದಾರರು `ಚಳಿಗಾಲದ ಅಧಿವೇಶನದಲ್ಲಿ ಅರಣ್ಯವಾಸಿಗಳ ಸಮಸ್ಯೆ ಬಗ್ಗೆ ಚರ್ಚಿಸಿ’ ಎಂದು ಆಗ್ರಹಿಸಿದ್ದಾರೆ. ಶನಿವಾರ ಜಿಲ್ಲಾಕೇಂದ್ರ ಕಾರವಾರದಲ್ಲಿ ಸಾವಿರಾರು ಜನ ಈ ಬಗ್ಗೆ ಹೋರಾಟ ನಡೆಸಿ, ಸರ್ಕಾರಕ್ಕೆ ತಮ್ಮ ಬೇಡಿಕೆ ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ 12 ತಾಲೂಕಿನ ಅರಣ್ಯವಾಸಿಗಳು ಶನಿವಾರ ಕಾರವಾರಕ್ಕೆ ಬಂದಿದ್ದು, ತಮ್ಮ ಆತಂಕದ ಜೊತೆ ಅಹವಾಲು ಸಲ್ಲಿಸಿದರು. ಅರಣ್ಯವಾಸಿಗಳ ಕಲಾ ತಂಡದವರು ವಿವಿಧ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಜಾಥಾ ನಡೆಸಿದರು. `ಅರಣ್ಯ ಹಕ್ಕು ಕಾಯಿದೆ, ನ್ಯಾಯಾಲಯದ ತೀರ್ಪು ಮತ್ತು ಕೇಂದ್ರ ಸರ್ಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ 73 ಸಾವಿರ ಅರಣ್ಯ ಹಕ್ಕು ಅರ್ಜಿಗಳು ತಿರಸ್ಕರಿಸಿರುವ ಹಿನ್ನಲೆ ಅವರೆಲ್ಲರೂ ಜಿಲ್ಲಾ ಅರಣ್ಯ ಭೂಮಿ ಹಕ್ಕು ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಆಕ್ಷೇಪ ಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಹೋರಾಟದ ಭಾಗವಾಗಿ ಮೆರವಣಿಗೆ ನಡೆದಿದ್ದು, ಮಾಲಾದೇವಿ ಕ್ರೀಡಾಮಗಣದಲ್ಲಿ ಸಮಾವೇಶ ಜರುಗಿತು. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ಜೊತೆ ಪ್ರಮುಖರಾದ ಇಬ್ರಾಹೀಂ ಗೌಡಳ್ಳಿ, ರಾಜೇಶ್ ಮಿತ್ರ ನಾಯ್ಕ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಮಂಜುನಾಥ ಮರಾಠಿ ನಾಗೂರು, ಮಹೇಶ ನಾಯ್ಕ ಕಾನಕ್ಕಿ, ಶಿವಾನಂದ ಜೋಗಿ ಮುಂಡಗೋಡ, ರಮಾನಂದ ನಾಯಕ ಅಚವೆ, ಭೀಮಸಿ ವಾಲ್ಮೀಕಿ, ಜಗದೀಶ್ ಶಿರಳಗಿ, ಪಾಂಡುರAಗ ನಾಯ್ಕ ಬೆಳಕೆ, ಚಂದ್ರ ಪೂಜಾರಿ ಮಂಚಿಕೇರಿ, ದಿವಾಕರ್ ಮರಾಠಿ ಆನಗೋಡ, ದೇವರಾಜ ಗೊಂಡ, ರಪೀಕ ಗಫಾರ, ಪ್ರಭಾಕರ ವೇಳಿಪ್ ಜೋಯಿಡ, ವಿಜು ಪೀಟರ್ ಪಿಲ್ಲೆ, ಶಾಂತರಾಮ ನಾಯ್ಕ ಅಂಕೋಲ, ರಾಮು ಕಲಕರಡಿ, ಹರಿಹರ ನಾಯ್ಕ ಓಂಕಾರ, ಸೀತಾರಾಮ ಗೌಡ, ಅರವಿಂದ ಗೌಡ, ಉದಯ ಗುನಗ ಅಚವೆ, ಶಂಕರ್ ಕೊಡಿಯಾ, ಮಾದೇವ ನಾಯಕ ಇತರರು ಹೆಜ್ಜೆ ಹಾಕಿದರು.