ಮಣಿಪಾಲದ 29 ವಿದ್ಯಾರ್ಥಿಗಳು ಚಾರಣಕ್ಕಾಗಿ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದು, ಚಾರಣಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಭಾನುವಾರ ಶಿರಸಿ ಬಳಿಯ ಮತ್ತಿಘಟ್ಟ ಜಲಪಾತದಲ್ಲಿ ಬಿದ್ದು ಸಾವನಪ್ಪಿದ್ದಾರೆ.
ದೆಹಲಿ ಮೂಲದ ಶಿವೋಹಂ ತಿವಾರಿ (29) ಅವರು ಮಣಿಪಾಲದಲ್ಲಿ ಬಿ ಟೆಕ್ ಓದುತ್ತಿದ್ದರು. ತಮ್ಮ ಸಹಪಾಠಿಗಳ ಜೊತೆ ಅವರು ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದರು. ಹೊನ್ನಾವರ-ಗೋಕರ್ಣ ಸಮೀಪದ ಸುತ್ತಾಟದ ನಂತರ ಕಾಡು ಅಧ್ಯಯನಕ್ಕಾಗಿ ಶಿರಸಿ ಕಡೆ ಪ್ರಯಾಣ ಬೆಳೆಸಿದ್ದರು.
ಮತ್ತಿಘಟ್ಟ ಜಲಪಾತಕ್ಕೆ ತೆರಳಿದ ಆ ಎಲ್ಲಾ ಸ್ನೇಹಿತರು ಅಲ್ಲಿನ ನೀರಿನಲ್ಲಿ ಆಟವಾಡುತ್ತಿದ್ದರು. ಆ ವೇಳೆ ಶಿವೋಹಂ ಅವರು ಅಲ್ಲಿದ್ದ ಕಲ್ಬಂಡೆ ಮೇಲಿನಿಂದ ನೀರಿಗೆ ಹಾರಿದ್ದು, ಈಜು ಬಾರದೇ ಅಸ್ವಸ್ಥರಾದರು. ಮೂಗಿನಿಂದ ನೀರು ಕುಡಿದಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಆದರೆ, ದಾರಿ ಮಧ್ಯೆಯೇ ಅವರು ಅಸುನೀಗಿದರು.