`ಅಘನಾಶಿನಿ – ವೇದಾವತಿ ನದಿ ಜೋಡಣೆಯ ವಿರೋಧಕ್ಕೆ ಹೋರಾಟ ಅವಶ್ಯ’ ಎಂದು ಈ ಹಿಂದೆ ಬೇಡ್ತಿ – ಅಘನಾಶಿನಿ ಕೊಳ್ಳ ಮುಳುಗಡೆ ಯೋಜನೆ ವಿರೋಧ ಸಮಿತಿ ಕಾರ್ಯಾದರ್ಶಿಯಾಗಿದ್ದ ಎನ್ ವಿ ಹೆಗಡೆ ಮುತ್ತಿಗೆ ಅವರು ಹೇಳಿದ್ದಾರೆ. `ಫೆ 11ರಂದು ನಡೆಯಲಿರುವ ಪಾದಯಾತ್ರೆ ಹಾಗೂ ಸಭೆಯಲ್ಲಿ ಹೆಚ್ಚಿನ ಜನ ಭಾಗವಹಿಸಬೇಕು’ ಎಂದವರು ಕರೆ ನೀಡಿದ್ದಾರೆ.
ಸಿದ್ದಾಪುರದ ಬಿದ್ರಖಾನ್ ಬಳಿಯ ಮಹಾಗಣಪತಿ ದೇವಾಲಯದಲ್ಲಿ ಜರುಗಿದ ಸಭೆಯಲ್ಲಿ ಅವರು ಮಾತನಾಡಿದ್ದು, `ಹೋರಾಟದ ಯಶಸ್ಸು ಜನ ಬೆಂಬಲದ ಮೇಲೆ ಅವಲಂಬಿತವಾಗಿರುತ್ತದೆ. ಅಘನಾಶಿನಿ ನದಿ ಜೋಡಣೆಯು ಈ ಭಾಗದ ಬದುಕಿನ ಜೀವನ ವ್ಯವಸ್ಥೆಗಳ ಮೇಲೆ ಮಾರಕವಾಗಲಿದೆ. ಯೋಜನೆ ಸ್ಥಗಿತಗೊಳಿಸಲು ಸಾರ್ವತ್ರೀಕವಾಗಿ ಒಗ್ಗಟ್ಟಿನಿಂದ ಹೋರಾಟ ಮಾಡೋಣ’ ಎಂದು ಹೇಳಿದರು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸಭೆಯ ಅಧ್ಯಕ್ಷತೆವಹಿಸಿ ಸಲಹೆ ನೀಡಿದರು. ಮಾಹಭಲೇಶ್ವರ ನಾಯ್ಕ ಬೇಡ್ಕಣಿ, ಜೈವಂತ ಹೆಗಡೆ ಕಲ್ಲಾಳಿಮನೆ, ಎಮ್ ಎನ್ ಗೌಡ, ಎಮ್ ಎಸ್ ನಾಯ್ಕ ನರಮುಂಡಗಿ, ಸರೋಜಾ ಡಿ ನಾಯ್ಕ, ಬಿಡಿ ನಾಯ್ಕ ಕುರಗೆತೋಟ, ವೆಂಕಟೇಶ ಗೌಡ ಬಿದ್ರಖಾನ, ಶ್ಯಾಮಲ ಗೌಡ ಹುಣಸೇಕೈ, ಶ್ರೀನಿವಾಸ ಹೆಗಡೆ ಬಿದ್ರಖಾನ, ಸತೀಶ್ ನಾಯ್ಕ ಐತಳ್ಳಿ ಮುಂತಾದವರು ಭಾಗವಹಿಸಿದರು.