ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ `ಆನೆ ತಪಾಸಣಾ ಕೇಂದ್ರ’ ಶುರುವಾಗಿದೆ. ರಸ್ತೆಗೆ ಅಡ್ಡಲಾಗಿ ಬರುವ ಆನೆಗಳು ಜನರ ವಾಹನ `ತಪಾಸಣೆ’ ನಡೆಸಿ ಬಿಡುತ್ತಿವೆ. ಆನೆ ನೋಡಿದ ಕೆಲವರು ಆತಂಕಕ್ಕೆ ಒಳಗಾಗುತ್ತಿದ್ದು, ಇನ್ನು ಕೆಲವರು ವನ್ಯಜೀವಿ ದರ್ಶನದ ಸಂತಸ ಹಂಚಿಕೊಳ್ಳುತ್ತಿದ್ದಾರೆ.
ದಾAಡೇಲಿಯ ಅಂಬಿಕಾನಗರ-ಬೊಮ್ಮನಳ್ಳಿ ಮಾರ್ಗದಲ್ಲಿ ಬುಧವಾರ ಮತ್ತೊಂದು ಆನೆ ತಪಾಸಣಾ ಕೇಂದ್ರ ಶುರುವಾಗಿದೆ. ಈ ದಿನ ಆ ಮಾರ್ಗದಲ್ಲಿ ಓಡಾಡುವ ಸರ್ಕಾರಿ ಬಸ್ಸನ್ನು ಆನೆ ತಪಾಸಣೆ ನಡೆಸಿದ್ದು, ಬಸ್ಸಿನಲ್ಲಿ ಏನೂ ಸಿಗದ ಕಾರಣ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಕೆಲ ದಿನಗಳ ಹಿಂದೆ ಯಲ್ಲಾಪುರ-ಹಳಿಯಾಳ ಮಾರ್ಗವಾಗಿ ಸಂಚರಿಸುವ ಬಸ್ಸನ್ನು ಈಚೆಗೆ ಆನೆಯೊಂದು ಅಡ್ಡಗಟ್ಟಿತ್ತು. ಅಲ್ಲಿಯೂ ಕೆಲ ಸಮಯದ ನಂತರ ಬಸ್ಸಿನ ಸುಗಮ ಸಂಚಾರಕ್ಕೆ ಆನೆ ಅವಕಾಶ ಮಾಡಿಕೊಟ್ಟಿತ್ತು. ಅದಾದ ನಂತರ ಅಂಬಿಕಾನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಒಂಟಿ ಸಲಗದ ಓಡಾಟ ಮೊಬೈಲ್ ಕ್ಯಾಮರಾಗೆ ಸೆರೆಯಾಗಿತ್ತು. ರಸ್ತೆ ಮೇಲೆ ಓಡಾಡುವ ಆನೆ ಜನರ ಓಡಾಟಕ್ಕೆ ಅಡ್ಡಿ ಮಾಡಿತ್ತು. ಈ ವಿದ್ಯಮಾನ ಮಾಸುವ ಮುನ್ನ ಭಾಗವತಿ ಭಾಗದಲ್ಲಿ ಸಂಚರಿಸುವ ಆನೆಯೊಂದು ಖಾಸಗಿ ವಾಹನ ಸವಾರರನ್ನು ಬೆದರಿಸಿತ್ತು. ಸಮೀಪ ಹೋದ ವ್ಯಕ್ತಿಯನ್ನು ಆನೆ ಬೆದರಿಸಿದ್ದು, ಆ ವಿಡಿಯೋ ವೈರಲ್ ಆಗಿತ್ತು.
ಕೆಲ ತಿಂಗಳ ಹಿಂದೆ ಮುಂಡಗೋಡದ ಪಾಳಾದಲ್ಲಿಯೂ ಸಹ ಆನೆಯೊಂದು ರಸ್ತೆಗೆ ಅಡ್ಡಲಾಗಿ ನಿಂತು, ಜನರ ಆತಂಕಕ್ಕೆ ಕಾರಣವಾಗಿತ್ತು. ಈ ಎಲ್ಲಾ ವಿದ್ಯಮಾನಗಳಲ್ಲಿಯೂ ಆನೆ ಅನಗತ್ಯವಾಗಿ ಯಾರಿಗೂ ತೊಂದರೆ ಮಾಡಿರಲಿಲ್ಲ. ಇದೀಗ ದಾಂಡೇಲಿಯ ಅಂಬಿಕಾನಗರ-ಬೊಮ್ಮನಳ್ಳಿ ಮಾರ್ಗದಲ್ಲಿ ಬಸ್ಸಿಗೆ ಆನೆ ಅಡ್ಡಗಟ್ಟಿದ್ದು, ಅದಾದ ನಂತರ ಕಾಡಿಗೆ ಮರಳಿದೆ.
ಇದನ್ನೂ ಓದಿ: ಬಸ್ಸು ಅಡ್ಡಗಟ್ಟಿದ ಆನೆ
ಇದನ್ನೂ ಓದಿ: ಒಂಟಿ ಸಲಗದ ಉಗ್ರ ಪ್ರತಾಪ
ಇದನ್ನೂ ಓದಿ: ಆನೆ ಬಂತು ಆನೆ
ಇದನ್ನೂ ಓದಿ: ರಸ್ತೆ ತಡೆದ ಒಂಟಿ ಸಲಗ
ಬುಧವಾರ ಬೊಮ್ಮನಳ್ಳಿ ಮಾರ್ಗದಲ್ಲಿ ಕಾಣಿಸಿದ ಆನೆ ವಿಶೇಷವಾಗಿ ಸರ್ಕಾರಿ ಬಸ್ಸುಗಳನ್ನು ಮಾತ್ರ ನಿಲ್ಲಿಸಿತು. 10 ನಿಮಿಷಗಳ ಕಾಲ ತಪಾಸಣೆ ನಡೆಸಿ ನಂತರ ಅವುಗಳ ಸಂಚಾರಕ್ಕೆ ಬಿಟ್ಟಿತು. ಈ ದಿನ ಎರಡು ಬಸ್ಸುಗಳ ತಪಾಸಣಾ ಕಾರ್ಯ ನಡೆಯಿತು. ಆನೆಯ ಆಶ್ಚರ್ಯಕರ ಚಲನ-ವಲನವನ್ನು ಜನ ತಮ್ಮ ಮೊಬೈಲಿನಲ್ಲಿ ಚಿತ್ರಿಕರಿಸಿದರು.