ಯಲ್ಲಾಪುರದ ಜೋಡುಕೆರೆಯಲ್ಲಿ ಆಶ್ರಯಪಡೆದ ಮೊಸಳೆ ಕಳೆದ ಮೂರು ದಿನಗಳಿಂದ ದಡಕ್ಕೆ ಬರುತ್ತಿದೆ. ಜನ ಸಾಮಾನ್ಯರು ಓಡಾಡುವಾಗ ದಡಕ್ಕೆ ಬಂದು ಆತಂಕವನ್ನುoಟು ಮಾಡುವ ಮೊಸಳೆ ತಜ್ಞರು ಆಗಮಿಸಿದಾಗ ನೀರಿನಿಂದ ಹೊರ ಬರುತ್ತಿಲ್ಲ. ಕೆರೆಯಲ್ಲಿ ನೀರು ಅಪಾರ ಪ್ರಮಾಣದಲ್ಲಿರುವುದರಿಂದ ಮೊಸಳೆಯನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ.
2025ರ ನವೆಂಬರ್ 26ರಂದು ಯಲ್ಲಾಪುರದ ಜೋಡುಕೆರೆಯಲ್ಲಿ ಮೊಸಳೆ ಕಾಣಿಸಿತು. ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದು, ಅರಣ್ಯ ಇಲಾಖೆಯವರು ಮೊಸಳೆ ಹಿಡಿಯುವ ಸಾಹಸ ಮಾಡಿದರು. ಆದರೆ, ಸ್ಥಳೀಯ ಅರಣ್ಯ ಸಿಬ್ಬಂದಿಯಿoದ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಅದೇ ದಿನ ಅರಣ್ಯಾಧಿಕಾರಿಗಳು ದಾಂಡೇಲಿಯ ಮೊಸಳೆ ತಜ್ಞರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅದಾದ ನಂತರ ಪತ್ರ ಬರೆದು ಮೊಸಳೆ ಸ್ಥಳಾಂತರದ ಕಾರ್ಯಾಚರಣೆ ನಡೆಸುವಂತೆ ಕೋರಿದರು. ಈ ಹಿನ್ನಲೆ ದಾಂಡೇಲಿಯ ತಜ್ಞರು ಜೋಡುಕರೆಗೆ ಆಗಮಿಸಿ ಪರಿಶೀಲನೆ ಮಾಡಿದರು. ಆದರೆ, ಮೊಸಳೆಯನ್ನು ಬಲೆಗೆ ಬೀಳಿಸುವ ಉದ್ದೇಶದಿಂದ ಆಗಮಿಸಿದ ದಾಂಡೇಲಿಯ ತಜ್ಞರಿಂದ ಆ ಜೀವಿ ತಪ್ಪಿಸಿಕೊಂಡಿತು.
ದಾoಡೇಲಿಯಿoದ ಬಂದ ತಜ್ಞರು ದಿನವಿಡೀ ಕಾದರೂ ಆ ವೇಳೆ ಮೊಸಳೆ ದಡಕ್ಕೆ ಬರಲಿಲ್ಲ. ದಡದಲ್ಲಿರಿಸಿದ ಬೋನಿಗೂ ಮೊಸಳೆ ಬೀಳಲಿಲ್ಲ. ಸಣ್ಣ ಪುಟ್ಟ ಮಾಂಸ ನೀಡಿ ಆಮೀಷ ಒಡ್ಡುವ ಕೆಲಸ ನಡೆದರೂ ಅದಕ್ಕೆ ಆ ಮೊಸಳೆ ಒಪ್ಪಲಿಲ್ಲ. ಅದಾಗಿಯೂ ಅರಣ್ಯ ಒಲಾಖೆ ಮೊಸಳೆ ಹಿಡಿಯುವ ನಿಟ್ಟಿನಲ್ಲಿ ತಮ್ಮ ನಿಲುವು ಬದಲಿಸಿಲ್ಲ. ಹೇಗಾದರೂ ಮಾಡಿ ಮೊಸಳೆ ಹಿಡಿಯಲೇ ಬೇಕು ಎಂದು ಕಾದು ಕುಳಿತಿರುವ ಅರಣ್ಯ ಸಿಬ್ಬಂದಿ, ಸದ್ಯ ಆ ಮೊಸಳೆಯ ಚಲನ-ವಲನದ ಮೇಲೆ ನಿಗಾವಿರಿಸಿದ್ದಾರೆ. `ಜೋಡುಕೆರೆಯಲ್ಲಿ ನೀರಿರುವ ಕಾರಣ ಮೊಸಳೆ ಹಿಡಿಯಲು ತಜ್ಞರಿಂದಲೂ ಸಾಧ್ಯವಾಗುತ್ತಿಲ್ಲ. ಕೋಳಿ ತ್ಯಾಜ್ಯವನ್ನು ಒಂದಡೆ ಇರಿಸಿ ಅಲ್ಲಿಯೇ ಮೊಸಳೆ ಆಹಾರ ಸೇವನೆಗೆ ಬರುವ ರೂಢಿ ಮಾಡಿಸಲಾಗುತ್ತಿದೆ. ಆಹಾರ ಸೇವನೆಗಾಗಿ ಮೊಸಳೆ ಆಗಮಿಸಿದಾಗ ಸಮಯ ಸಾಧಿಸಿ ಅದನ್ನು ಸೆರೆಹಿಡಿಯುವ ಪ್ರಯತ್ನ ನಡೆದಿದೆ’ ಎಂದು ವಲಯ ಅರಣ್ಯಾಧಿಕಾರಿ ನರೇಶ ಕೆವಿ ಅವರು ಮಾಹಿತಿ ನೀಡಿದ್ದಾರೆ. ಮೊಸಳೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಮೊಸಳೆ ದಡಕ್ಕೆ ಬಂದಾಗಲೆಲ್ಲ ಮಾಹಿತಿ ಕೊಡುವುದಕ್ಕಾಗಿ ಅರಣ್ಯ ಸಿಬ್ಬಂದಿಯೊಬ್ಬರು ಜೋಡುಕೆರೆ ಸುತ್ತಲು ಸಂಚರಿಸುತ್ತಿದ್ದಾರೆ.
ಈ ಎಲ್ಲದರ ನಡುವೆ ಮಂಜುನಾಥ ನಗರದ ಜನ ಮೊಸಳೆ ವಿರುದ್ಧ ವೈಮನಸ್ಸು ಹೊಂದಿದ್ದಾರೆ. ನಿತ್ಯ ಓಡಾಡುವ ಜನರಿಗೆ ಆತಂಕವನ್ನುoಟು ಮಾಡುವ ಮೊಸಳೆಯನ್ನು ತಾವೇ ಹಿಡಿಯುವುದಾಗಿ ಅವರು ಘೋಷಿಸಿದ್ದಾರೆ. ದಾಂಡೇಲಿಯ ಹಾವು ತಜ್ಞ ಗಜಾನನ ಮೂಳೆ ಅವರನ್ನು ಸಂಪರ್ಕಿಸಿದ ಮಂಜುನಾಥ ನಗರದ ಸತೀಶ ನಾಯ್ಕ ಅವರು ಅವರನ್ನು ಕರೆಯಿಸಿ ಮೊಸಳೆ ಹಿಡಿಸುವ ಬಗ್ಗೆ ಮಾತನಾಡಿದ್ದಾರೆ. `ಮಳೆ ಸುರಿದ ಅವಧಿಯಲ್ಲಿಯೂ ಮೊಸಳೆ ದಡಕ್ಕೆ ಆಗಮಿಸಿದೆ. ಆ ವೇಳೆ ಮೊಸಳೆ ನೋಡಿದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆಯವರು ಈ ಮೊಸಳೆ ಹಿಡಿಯದೇ ಇದ್ದರೆ ನಾವೇ ಮೊಸಳೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುತ್ತೇವೆ’ ಎಂದು ಸತೀಶ ನಾಯ್ಕ ಅವರು ಹೇಳಿದ್ದಾರೆ.